ರೋಹಿತ್ ಶರ್ಮಾ CSK ತಂಡದ ಮುಂದಿನ ನಾಯಕ? ಮಾಜಿ ಕ್ರಿಕೆಟಿಗನ ಅಭಿಲಾಷೆ
TV9 Web | Updated By: ಝಾಹಿರ್ ಯೂಸುಫ್
Updated on:
Mar 11, 2024 | 3:08 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿರುವುದು ವಿಶೇಷ. ಅಲ್ಲದೆ ಇದು ಧೋನಿಯ ಕೊನೆಯ ಐಪಿಎಲ್ ಆಗಿರಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇದೇ ಕಾರಣದಿಂದಾಗಿ ಇದೀಗ ರೋಹಿತ್ ಶರ್ಮಾ ಮುಂದಿನ ವರ್ಷ ಸಿಎಸ್ಕೆ ಪರ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
1 / 5
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕರಾಗಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಮಾಜಿ ಆಟಗಾರ ಅಂಬಾಟಿ ರಾಯುಡು ಅವರ ಹೇಳಿಕೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿರುವ ಹಿಟ್ಮ್ಯಾನ್ ಈ ಬಾರಿಯ ಐಪಿಎಲ್ನಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ.
2 / 5
ಇದಾಗ್ಯೂ ರೋಹಿತ್ ಶರ್ಮಾ ಮುಂದಿನ ವರ್ಷ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ 2025 ರಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಈ ವೇಳೆ ಹಿಟ್ಮ್ಯಾನ್ ಆಕ್ಷನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗೆ ಹರಾಜಿನಲ್ಲಿ ಕಾಣಿಸಿಕೊಳ್ಳುವ ರೋಹಿತ್ ಶರ್ಮಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಲಿ ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ ಅಂಬಾಟಿ ರಾಯುಡು.
3 / 5
ಖಾಸಗಿ ಚಾನೆಲ್ವೊಂದರ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ರೋಹಿತ್ ಶರ್ಮಾ ಇನ್ನೂ ಐದಾರು ವರ್ಷಗಳವರೆಗೆ ಐಪಿಎಲ್ ಆಡುತ್ತಾರೆಂಬ ನಂಬಿಕೆಯಿದೆ. ಅವರು ನಾಯಕರಾಗಿ ಮುಂದುವರೆಯಲು ಬಯಸಿದರೆ, ಖಂಡಿತವಾಗಿಯೂ ಹಲವು ಫ್ರಾಂಚೈಸಿಗಳು ಅವರ ಖರೀದಿಗೆ ಮುಂದಾಗಲಿದೆ.
4 / 5
ನಾನಂತು ರೋಹಿತ್ ಶರ್ಮಾ ಐಪಿಎಲ್ 2025 ರಲ್ಲಿ CSK ಗಾಗಿ ಆಡಬೇಕೆಂದು ಬಯಸುತ್ತೇನೆ. ಇತ್ತ ಎಂಸ್ ಧೋನಿ ನಿವೃತ್ತರಾದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಬಹುದು. ಇದೇ ಕಾರಣದಿಂದಾಗಿ ನಾನು ಹಿಟ್ಮ್ಯಾನ್ ಸಿಎಸ್ಕೆ ತಂಡದ ನಾಯಕರಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ.
5 / 5
ಅದರಂತೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡರೆ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಲಿದೆಯಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕನಾಗಿ ಮೆರೆದಿದ್ದ ರೋಹಿತ್ ಶರ್ಮಾ ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿರುವುದು ವಿಶೇಷ.