
ರಣಜಿ ಟೂರ್ನಿ ಗ್ರೂಪ್-ಬಿ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಜಮ್ಮು-ಕಾಶ್ಮೀರ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವೇಗಿ ಆಖಿಬ್ ನಬಿ (Auqib Nabi). ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬೌಲಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಆಖಿಬ್ ನಬಿ ಹಾಗೂ ಸುನಿಲ್ ಕುಮಾರ್ ರಾಜಸ್ಥಾನ್ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ರಾಜಸ್ಥಾನ್ ಕೇವಲ 152 ರನ್ಗಳಿಗೆ ಆಲೌಟ್ ಆಯಿತು. ಜಮ್ಮು ಕಾಶ್ಮೀರ ಪರ ಆಖಿಬ್ ನಬಿ 29 ರನ್ ನೀಡಿ 3 ವಿಕೆಟ್ ಪಡೆದರೆ, ಸುನಿಲ್ ಕುಮಾರ್ 32 ರನ್ ನೀಡಿ 4 ವಿಕೆಟ್ ಉರುಳಿಸಿದರು.

ಆ ಬಳಿಕ ಮೊದಲ ಇನಿಂಗ್ಸ್ ಆಡಿದ ಜಮ್ಮು ಕಾಶ್ಮೀರ ಪರ ಅಬ್ದುಲ್ ಸಮದ್ 76 ರನ್ ಚಚ್ಚಿದರು. ಇನ್ನು 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಖಿಬ್ ನಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶೀಸಿದರು. ಕೇವಲ 65 ಎಸೆತಗಳನ್ನು ಎದುರಿಸಿದ ಆಖಿಬ್ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 55 ರನ್ ಬಾರಿಸಿದರು. ಈ ಮೂಲಕ ಜಮ್ಮು ಕಾಶ್ಮೀರ ಮೊದಲ ಇನಿಂಗ್ಸ್ನಲ್ಲಿ 282 ರನ್ ಕಲೆಹಾಕಿತು.

130 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಆಖಿಬ್ ನಬಿ ಆಘಾತದ ಮೇಲೆ ಆಘಾತ ನೀಡಿದ್ದರು. ತಾನೆಸೆದ ಮೊದಲ 6 ಓವರ್ಗಳಲ್ಲಿ ಕೇವಲ 5 ರನ್ ನೀಡಿ ಆಖಿಬ್ 5 ವಿಕೆಟ್ ಉರುಳಿಸಿದರು. ಇದಾದ ಬಳಿಕ ಮತ್ತೆರಡು ವಿಕೆಟ್ ಪಡೆದರು. ಈ ಮೂಲಕ 11 ಓವರ್ಗಳಲ್ಲಿ ಕೇವಲ 24 ರನ್ ನೀಡಿ 7 ವಿಕೆಟ್ ಕಬಳಿಸಿದರು. ಪರಿಣಾಮ ರಾಜಸ್ಥಾನ್ ತಂಡವು ಕೇವಲ 89 ರನ್ಗೆ ಆಲೌಟ್ ಆಯಿತು.

ಈ ಮೂಲಕ ಜಮ್ಮು ಕಾಶ್ಮೀರ ತಂಡವು ಇನಿಂಗ್ಸ್ ಹಾಗೂ 41 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಎರಡು ಇನಿಂಗ್ಸ್ಗಳಲ್ಲಿ ಮಾರಕ ದಾಳಿ ಸಂಘಟಿಸಿದ ಬಲಗೈ ವೇಗಿ ಆಖಿಬ್ ನಬಿ ಒಟ್ಟು 10 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.