- Kannada News Photo gallery Cricket photos AUS vs WI australia beat west indies by 11 runs in 1st t20i
AUS vs WI: ವಾರ್ನರ್ ಸಿಡಿಲಬ್ಬರ; ಆಸ್ಟ್ರೇಲಿಯಾ ವಿರುದ್ಧ ವಿಂಡೀಸ್ಗೆ ಸತತ ನಾಲ್ಕನೇ ಸೋಲು
AUS vs WI: ಆಸ್ಟ್ರೇಲಿಯಾದ ಬ್ಲಂಡ್ಸ್ಟೋನ್ ಅರೆನಾ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 11 ರನ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
Updated on: Feb 09, 2024 | 6:33 PM

ಆಸ್ಟ್ರೇಲಿಯಾದ ಬ್ಲಂಡ್ಸ್ಟೋನ್ ಅರೆನಾ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 11 ರನ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 213 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಡೇವಿಡ್ ವಾರ್ನರ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದರು.

ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ ತಮ್ಮ ಇನ್ನಿಂಗ್ಸ್ನಲ್ಲಿ 36 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 70 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ವಾರ್ನರ್ ಹೊರತುಪಡಿಸಿ ಮತ್ತೊಬ್ಬ ಆರಂಭಿಕ ಜೋಸ್ ಇಂಗ್ಲಿಸ್ 39 ರನ್ ಹಾಗೂ ಟಿಮ್ ಡೇವಿಡ್ 37 ರನ್ಗಳ ಕೊಡುಗೆ ನೀಡಿದರು. ಉಳಿದಂತೆ ತಂಡದ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ.

ವಿಂಡೀಸ್ ಪರ ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು. ಜೇಸನ್ ಹೋಲ್ಡರ್ ಹಾಗೂ ರೋಮಾರಿಯೋ ಶೆಫರ್ಡ್ ತಲಾ 1 ವಿಕೆಟ್ ಪಡೆದರು.

ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ಗೆ ಆರಂಭಿಕರಿಬ್ಬರು 81 ರನ್ಗಳ ಸ್ಫೋಟಕ ಜೊತೆಯಾಟ ನೀಡಿದರು. ಈ ವೇಳೆ ಬ್ರೆಂಡಂನ್ ಕಿಂಗ್ 53 ರನ್ ಹಾಗೂ ಜಾನ್ಸನ್ ಚಾರ್ಲ್ಸ್ 42 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

ಈ ಇಬ್ಬರನ್ನು ಹೊರತುಪಡಿಸಿ ಕೊನೆಯಲ್ಲಿ ಜೇಸನ್ ಹೋಲ್ಡರ್ 37 ರನ್ಗಳ ಹೋರಾಟದ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರ್ಯಾರು ಹೆಚ್ಚು ಹೊತ್ತು ಮೈದಾನದಲ್ಲಿ ನಿಂತು ಗೆಲುವಿಗಾಗಿ ಹೋರಾಡಲಿಲ್ಲ. ಹೀಗಾಗಿ ತಂಡ ಪೂರ್ಣ 20 ಓವರ್ ಆಡಿ 202 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ಪರ ಆಡಂ ಝಂಪಾ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2 ವಿಕೆಟ್ ಪಡೆದರು. ಜೇಸನ್ ಬೆಹ್ರೆನ್ಡಾರ್ಫ್, ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬಾಟ್ ತಲಾ 1 ವಿಕೆಟ್ ಪಡೆದರು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.




