
ಐಸಿಸಿ ಟೂರ್ನಿಗಳಲ್ಲಿ ಫೈನಲ್ಗೇರಿತ್ತೇಂದರೆ ಟ್ರೋಫಿ ನನ್ನದೆ ಎಂಬಂತೆ ಬೀಗುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಶಾಕ್ ನೀಡುವಲ್ಲಿ ದಕ್ಷಿಣ ಆಫ್ರಿಕಾ ತಂಡ ಯಶಸ್ವಿಯಾಗಿದೆ. ಅದರಲ್ಲೂ ಇದುವರೆಗೂ ಒಂದೇ ಒಂದು ಫೈನಲ್ ಪಂದ್ಯದಲ್ಲಿ ಸೋಲಿನ ರುಚಿಯನ್ನೇ ಸವಿಯದ ಆಸ್ಟ್ರೇಲಿಯಾದ ಕೆಲವು ಅದೃಷ್ಟವಂತ ಆಟಗಾರರಿಗೆ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ.

ಹೌದು.. ಆಸ್ಟ್ರೇಲಿಯಾ ತಂಡದಲ್ಲಿರುವ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ನಂತಹ ಆಟಗಾರರ ಅಡಿಯಲ್ಲಿ ಆಸ್ಟ್ರೇಲಿಯಾ ಎಂದಿಗೂ ಫೈನಲ್‌ನಲ್ಲಿ ಸೋತಿಲ್ಲ. ಸ್ಟಾರ್ಕ್ ಮತ್ತು ಹೇಜಲ್‌ವುಡ್ ಇದಕ್ಕೂ ಮೊದಲು ತಲಾ 7 ಫೈನಲ್‌ಗಳನ್ನು ಗೆದ್ದಿದ್ದರು. ಅಂದರೆ ಇವರಿಬ್ಬರು ಫೈನಲ್ ಪಂದ್ಯವನ್ನು ಆಡಿದರೆಂದರೆ ತಂಡವು ಪ್ರಶಸ್ತಿ ಗೆಲ್ಲುವುದು 100 ಪ್ರತಿಶತ ಖಚಿತವಾಗಿರುತ್ತಿತ್ತು. ಆದರೀಗ ಈ ಮೂವರು ಆಟಗಾರರು ತಂಡದಲ್ಲಿದ್ದರೂ ಗೆಲುವು ದಕ್ಕಲಿಲ್ಲ.

ಆದರೆ ಇದಕ್ಕೆ ತದ್ವಿರುದ್ಧವಾಗಿ ಆಫ್ರಿಕಾ ನಾಯಕ ಟೆಂಬಾ ಬವುಮಾ ಟೆಸ್ಟ್ ನಾಯಕತ್ವದಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ದಾಖಲೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ, ಡಬ್ಲ್ಯುಟಿಸಿ 2025 ರ ಫೈನಲ್ ಟೆಂಬಾ ಬವುಮಾ ಅವರ ನಾಯಕ ವೃತ್ತಿಜೀವನದ 10 ನೇ ಟೆಸ್ಟ್ ಆಗಿತ್ತು. ಈ 10 ಟೆಸ್ಟ್‌ಗಳಲ್ಲಿ, ಅವರು ಎಂದಿಗೂ ಸೋಲನ್ನು ಎದುರಿಸಿಲ್ಲ. ಬವುಮಾ ತಮ್ಮ ನಾಯಕತ್ವದಲ್ಲಿ 9 ಟೆಸ್ಟ್‌ಗಳನ್ನು ಗೆದ್ದಿದ್ದರೆ, 1 ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತ ಈ ಫೈನಲ್ ಸೋಲಿನೊಂದಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಹ್ಯಾಟ್ರಿಕ್ ಐಸಿಸಿ ಟ್ರೋಫಿ ಕನಸು ಭಗ್ನವಾಗಿದೆ. ಕಮ್ಮಿನ್ಸ್ ತಮ್ಮ ನಾಯಕತ್ವದಲ್ಲಿ 2021-23 ರ ಟೆಸ್ಟ್ ಚಾಂಪಿಯನ್ಶಿಪ್ ಮತ್ತು 2023 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರಯ. ಇದೀಗ ಅವರಿಗೆ 2025 ರ ಡಬ್ಲ್ಯುಟಿಸಿ ಫೈನಲ್ ಗೆಲ್ಲುವ ಅವಕಾಶವಿತ್ತು. ಆದರೆ ಆಫ್ರಿಕಾ ತಂಡಕ್ಕೆ ಅದಕ್ಕೆ ಅವಕಾಶ ಕೊಡಲಿಲ್ಲ.

ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆಫ್ರಿಕಾ ತಂಡ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮೊದಲ ಬಾರಿಗೆ ಸೋಲಿಸಿದ ದಾಖಲೆ ಬರೆದಿದೆ. 1999ರ ವಿಶ್ವಕಪ್‌ನಲ್ಲಿ ಇಬ್ಬರ ನಡುವಿನ ಪಂದ್ಯವು ಸಮಬಲಗೊಂಡಿತ್ತು. 2007 ರ ವಿಶ್ವಕಪ್ ಘರ್ಷಣೆಯಲ್ಲಿ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು. 2023 ರ ವಿಶ್ವಕಪ್‌ನಲ್ಲಿಯೂ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಆದರೆ, 2025ರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.