ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಅನುಭವಿ ಆಟಗಾರ, ಮಾಜಿ ನಾಯಕ ಅಜರ್ ಅಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ಕರಾಚಿಯಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ.
ಯೂನಿಸ್ ಖಾನ್ (10,099 ರನ್), ಜಾವೇದ್ ಮಿಯಾಂದಾದ್ (8,832), ಇಂಜಮಾಮ್-ಉಲ್-ಹಕ್ (8,829), ಮತ್ತು ಮೊಹಮ್ಮದ್ ಯೂಸುಫ್ (7,530) ನಂತರ ಅಜರ್ 96 ಪಂದ್ಯಗಳಲ್ಲಿ 42.49 ಸರಾಸರಿ ಮೂಲಕ 7,097 ರನ್ ಗಳಿಸಿದ ಪಾಕಿಸ್ತಾನದ ಐದನೇ ಟೆಸ್ಟ್ ಬ್ಯಾಟರ್ ಆಗಿದ್ದಾರೆ.
25ನೇ ವಯಸ್ಸಿನಲ್ಲಿ, ಅಜರ್ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್‌ನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದರು. ಒಟ್ಟು 34 ಅರ್ಧ ಶತಕ ಮತ್ತು 19 ಬಾರಿಸಿದ್ದಾರೆ.
37 ವರ್ಷದ ಅಜರ್ ಅವರು ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ ಏಕೈಕ ಪಾಕಿಸ್ತಾನಿ ಬ್ಯಾಟರ್ ಆಗಿದ್ದಾರೆ. ಅವರು 2016 ರಲ್ಲಿ ದುಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಅಜರ್ ಅಜೇಯ 302 ಗಳಿಸಿದ್ದರು.
ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜರ್, "ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ದೊರೆತ ಅವಕಾಶ ನನಗೆ ದೊಡ್ಡ ಗೌರವವಾಗಿದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಕಠಿಣವಾಗಿರುತ್ತದೆ. ಸಾಕಷ್ಟು ಆಲೋಚಿಸಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಇದು ಸೂಕ್ತ ಸಂದರ್ಭ ಎಂದು ನಾನು ನಿರ್ಧಿರಿಸಿದ್ದೇನೆ" ಎಂದು ಹೇಳಿದ್ದಾರೆ.
ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಅಂದುಕೊಂಡಿದ್ದ ಬಹುತೇಕ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ. ನನಗೆ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯಿತು. ನಾನು ಜೀವನದ ಅತ್ಯಂತ ಸುಂದರವಾದ ಕ್ಷಣಗಳನ್ನು ಗಳಿಸಿದ್ದೇನೆ. ನನ್ನ ತಂಡದವರಿಗೆ, ನನ್ನ ಕೋಚ್ಗಳಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂಬುದು ಅಜರ್ ಮಾತು.
ಅಜರ್ ಅಲಿ ಏಕದಿನ ಕ್ರಿಕೆಟ್ ಮಾದರಿಯಿಂದ 2018ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. 2016ರಿಂದ 2020ರ ಅವಧಿಯಲ್ಲಿ ಅಜರ್ ಅಲಿ 9 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. 12 ವರ್ಷಗಳ ವೃತ್ತಿಜೀವನದಲ್ಲಿ, ಅಜರ್ ಎರಡು ದ್ವಿಶತಕಗಳನ್ನು ಸಹ ಗಳಿಸಿದ್ದಾರೆ.
Published On - 10:58 am, Sat, 17 December 22