
ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. ಡ್ಯುನೆಡಿನ್ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕ ಆಟಗಾರ ಫಿನ್ ಅಲೆನ್ 62 ಎಸೆತಗಳಲ್ಲಿ 16 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 137 ರನ್ ಬಾರಿಸಿದರು. ಅಲೆನ್ ಅವರ ಈ ಶತಕದ ನೆರವಿನಿಂದ ನ್ಯೂಝಿಲೆಂಡ್ 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಬಾಬರ್ ಆಝಂ 37 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 58 ರನ್ ಬಾರಿಸಿದ್ದರು. ಇದಾಗ್ಯೂ ಪಾಕ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 179 ರನ್ಗಳಿಸಿ 45 ರನ್ಗಳಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನೊಂದಿಗೆ ಸೋತ ಪಂದ್ಯಗಳಲ್ಲಿ ಸತತ ಮೂರು ಅರ್ಧಶತಕ ಬಾರಿಸಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ದಾಖಲೆಯೊಂದು ಬಾಬರ್ ಆಝಂ ಪಾಲಾಯಿತು. ಇದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ದದ ಮೊದಲೆರಡು ಪಂದ್ಯಗಳಲ್ಲಿ ಬಾಬರ್ ಹಾಫ್ ಸೆಂಚುರಿ ಸಿಡಿಸಿದ್ದರು.

ನ್ಯೂಝಿಲೆಂಡ್ ವಿರುದ್ಧದ ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಬಾಬರ್ 35 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 57 ರನ್ ಬಾರಿಸಿದ್ದರು. ಇನ್ನು 2ನೇ ಪಂದ್ಯದಲ್ಲಿ 43 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 66 ರನ್ ಚಚ್ಚಿದ್ದರು. ಈ ಎರಡು ಪಂದ್ಯಗಳಲ್ಲೂ ಪಾಕಿಸ್ತಾನ್ ತಂಡ ಸೋಲನುಭವಿಸಿತ್ತು.

ಇದೀಗ ಮೂರನೇ ಪಂದ್ಯದಲ್ಲೂ ಬಾಬರ್ ಆಝಂ ಅರ್ಧಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲೂ ಪಾಕ್ ತಂಡ ಸೋತಿದೆ. ಇದರೊಂದಿಗೆ ಸೋತ ಪಂದ್ಯಗಳಲ್ಲಿ ಸತತ ಅರ್ಧಶತಕ ಬಾರಿಸಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ವಿಶೇಷ ದಾಖಲೆ ಬಾಬರ್ ಆಝಂ ಪಾಲಾಯಿತು.

ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲೂ ಬಾಬರ್ ಆಝಂ 3ನೇ ಸ್ಥಾನಕ್ಕೇರಿದ್ದಾರೆ. ಪಾಕ್ ಪರ 101 ಇನಿಂಗ್ಸ್ ಆಡಿರುವ ಬಾಬರ್ ಇದುವರೆಗೆ 3666 ರನ್ ಕಲೆಹಾಕಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಪರ 108 ಟಿ20 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಒಟ್ಟು 4037 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.