
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಆತಿಥೇಯ ತಂಡ ಗುಂಪು ಹಂತದಿಂದಲೇ ಟೂರ್ನಿಯಿಂದ ಹೊರಬಿತ್ತು. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತರೆ ಆ ನಂತರ ಭಾರತ ವಿರುದ್ಧವೂ ಸೋತಿತು. ಉಳಿದಂತೆ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿತ್ತು.

ತಂಡದ ಈ ಕಳಪೆ ಸಾಧನೆಗೆ ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿತ್ತು. ಅದರಲ್ಲೂ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಪಾಕಿಸ್ತಾನದ ಹೀನಾಯ ಸೋಲಿನ ನಂತರ, ಬಾಬರ್ ಆಝಂರನ್ನು ತಂಡದಿಂದ ಹೊರಹಾಕಬೇಕು ಎಂಬ ಕೂಗು ಜೋರಾಗಿದೆ. ಈ ಮಧ್ಯೆ, ಪಾಕಿಸ್ತಾನದ ಮಾಜಿ ಕೋಚ್ ಮತ್ತು ಆಟಗಾರ ಮೊಹ್ಸಿನ್ ಖಾನ್ ವಿಚಿತ್ರ ಹೇಳಿಕೆ ನೀಡಿದ್ದಾರೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಬರ್ ಅಜಮ್ ಕೇವಲ 87 ರನ್ ಗಳಿಸಲಷ್ಟೇ ಶಕ್ತರಾದರು. ಮತ್ತೊಂದೆಡೆ, ವಿರಾಟ್ ಕೊಹ್ಲಿ ಇದುವರೆಗೆ 133 ರನ್ ಬಾರಿಸಿದ್ದಾರೆ. ಇದಲ್ಲದೆ ವಿರಾಟ್ ಪಾಕಿಸ್ತಾನ ವಿರುದ್ಧ ಶತಕದ ಇನ್ನಿಂಗ್ಸ್ ಕೂಡ ಆಡಿದ್ದರು. ವಾಸ್ತವವಾಗಿ ಕ್ರಿಕೆಟ್ ಅಭಿಮಾನಿಗಳು ಆಗಾಗ್ಗೆ ಈ ಇಬ್ಬರು ಆಟಗಾರರನ್ನು ಹೋಲಿಸುತ್ತಲೇ ಇರುತ್ತಾರೆ.

ಆದಾಗ್ಯೂ, ವಿರಾಟ್ ಅವರ ಅಂಕಿಅಂಶಗಳಿಗೆ ಹೋಲಿಸಿದರೆ, ಬಾಬರ್ ಅವರಿಗಿಂತ ಬಹಳ ಹಿಂದಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕೋಚ್ ಮತ್ತು ಆಟಗಾರ ಮೊಹ್ಸಿನ್ ಖಾನ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಬಾಬರ್ ಮುಂದೆ ವಿರಾಟ್ ಶೂನ್ಯ ಎಂದಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಂ ನಡುವಿನ ಹೋಲಿಕೆಯ ಕುರಿತು ಎಆರ್‌ವೈ ನ್ಯೂಸ್ ಜೊತೆ ಮಾತನಾಡಿದ ಮೊಹ್ಸಿನ್ ಖಾನ್, ‘ಮೊದಲನೆಯದಾಗಿ, ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ, ವಿರಾಟ್ ಕೊಹ್ಲಿಗೆ ಬಾಬರ್ ಆಝಂ ಜೊತೆ ಯಾವುದೇ ಹೋಲಿಕೆ ಇಲ್ಲ. ಬಾಬರ್ ಮುಂದೆ ಕೊಹ್ಲಿ ಶೂನ್ಯ ಎಂದಿದ್ದಾರೆ.

ನಾವು ಇಲ್ಲಿ ಯಾರು ಉತ್ತಮ ಆಟಗಾರ ಎಂದು ಹೇಳುತ್ತಿಲ್ಲ, ನಾವು ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ಸಂಪೂರ್ಣವಾಗಿ ಹಾಳಾಗಿದೆ. ಯಾವುದೇ ಯೋಜನೆ ಇಲ್ಲ, ತಂತ್ರವಿಲ್ಲ, ಅರ್ಹತೆ ಇಲ್ಲ, ಮತ್ತು ಹೊಣೆಗಾರಿಕೆ ಇಲ್ಲ ಎಂದಿದ್ದಾರೆ. ಮೊಹ್ಸಿನ್ ಖಾನ್ ಅವರ ಈ ಹೇಳಿಕೆ ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.