
ಏಷ್ಯಾಕಪ್ 2023 ಟೂರ್ನಿ ರೋಚಕ ಘಟ್ಟದಲ್ಲಿದೆ. ಇನ್ನೇನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ಕ್ರಿಕೆಟ್ ತಂಡ ಈಗಾಗಲೇ ಫೈನಲ್ಗೆ ಪ್ರವೇಶಿಸಿದ್ದು, ಪಾಕ್ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ.

ಏಷ್ಯಾಕಪ್ ಬಳಿಕ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಐಸಿಸಿ ಏಕದಿನ ವಿಶ್ವಕಪ್ಗು ಮುನ್ನ ಈ ಸರಣಿ ಆಯೋಜಿಸಿರುವುದು ಉಭಯ ತಂಡಗಳಿಗೆ ಬಹಳ ಉಪಯುಕ್ತ. ಆದರೆ, ಆಸೀಸ್ ವಿರುದ್ಧ ಏಕದಿನ ಸರಣಿಗೆ ಟೀಮ್ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ.

ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ ಸೆಪ್ಟೆಂಬರ್ 22 ರಂದು ಪ್ರಾರಂಭವಾಗುತ್ತದೆ. ಇದು ಭಾರತ ಕ್ರಿಕೆಟ್ ತಂಡಕ್ಕೆ ಅಂತಿಮ ತಯಾರಿಯಾಗಿದೆ. ಹೀಗಾಗಿ, ಆಯ್ಕೆ ಸಮಿತಿಯು ಯಾವುದೇ ಗೊಂದಲವಿಲ್ಲದೆ ಬಲಿಷ್ಠ ತಂಡವನ್ನು ಇದೇ ವಾರದಲ್ಲಿ ಹೆಸರಿಸಲಿದೆ ಎಂದು ವರದಿ ಆಗಿದೆ.

ಆಸ್ಟ್ರೇಲಿಯಾ ಸರಣಿಗಾಗಿ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನವಿಲ್ಲ ಎಂಬುದು ಖಚಿತವಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಸಂಜು ಅವರನ್ನು ಸ್ವಲ್ಪ ಸಮಯದ ವರೆಗೆ ಬ್ಯಾಕಪ್ ಆಗಿ ಮಾತ್ರ ಇರಿಸಿಕೊಳ್ಳಲು ತೀರ್ಮಾನಿಸಿದೆ. ಈ ಮೂಲಕ, ವಿಶ್ವಕಪ್ 2023, ಏಷ್ಯನ್ ಗೇಮ್ಸ್ 2023, ವಿಶ್ವಕಪ್, ಆಸೀಸ್ ವಿರುದ್ಧದ ಸರಣಿಯಲ್ಲಿ ಕೂಡ ಇವರಿಗೆ ಅವಕಾಶವಿಲ್ಲ.

ಈ ಬಗ್ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದು, “ನೋಡಿ, ಕೆಎಲ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಮತ್ತು ಮೂವರು ವಿಕೆಟ್ ಕೀಪರ್‌ಗಳು ಇರುವುದಿಲ್ಲ. ಅದೇ ದುರದೃಷ್ಟಕರ ಕಾರಣದಿಂದ ಸಂಜುಗೆ ಅವಕಾಶ ಸಿಗುವುದಿಲ್ಲ. ರಾಹುಲ್ ಮುಖ್ಯ ವಿಕೆಟ್-ಕೀಪರ್ ಜವಾಭ್ದಾರಿ ವಹಿಸಲಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇದರ ನಡುವೆ ಶ್ರೇಯಸ್ ಅಯ್ಯರ್ ಆಸೀಸ್ ವಿರುದ್ಧದ ಸರಣಿ ಮತ್ತು ವಿಶ್ವಕಪ್‌ಗೆ ಫಿಟ್ ಆಗಿದ್ದಾರಾ ಎಂಬುದು ಖಚಿತವಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಅಯ್ಯರ್ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಅಯ್ಯರ್ಗೆ ಕಾಣಿಸಿಕೊಂಡಿರುವ ಬೆನ್ನು ನೋವು ಹಳೆಯದೊ ಅಥವಾ ಹೊಸ ಇಂಜುರಿಯ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.

ಶ್ರೇಯಸ್ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ವಾಪಸಾತಿಯು ಕೇವಲ ಒಂಬತ್ತು ಎಸೆತಗಳಲ್ಲಿ ಕೊನೆಗೊಂಡಿತು. ಚೇತರಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಸದ್ಯ ಅಯ್ಯರ್ ಕೊಲಂಬೊದಲ್ಲಿ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಅಯ್ಯರ್ ಜಾಗ ತುಂಬಲು ಸೂರ್ಯಕುಮಾರ್ ಯಾದವ್ ಇರುವುದರಿಂದ ಚಿಂತಿಸಬೇಕಾಗಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.