Team India: ನಾನಾ-ನೀನಾ…ಕೊಹ್ಲಿ-ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ..!
TV9 Web | Updated By: ಝಾಹಿರ್ ಯೂಸುಫ್
Updated on:
Dec 16, 2021 | 6:38 PM
Virat Kohli vs Rohit Sharma: ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿರುವುದನ್ನು ವಿರಾಟ್ ಕೊಹ್ಲಿ ಲಘುವಾಗಿ ತೆಗೆದುಕೊಂಡಿಲ್ಲ. (ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
1 / 6
ಟೀಮ್ ಇಂಡಿಯಾ ನಾಯಕತ್ವ ವಿವಾದ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಬುಧವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ, ನನ್ನ ಮತ್ತು ರೋಹಿತ್ ನಡುವೆ ಯಾವುದೇ ಸಮಸ್ಯೆ ಇಲ್ಲ. ಯಾವುದೇ ಭಿನ್ನಾಭಿಪ್ರಾಯ ಕೂಡ ಇಲ್ಲ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.
2 / 6
ಆದರೆ ಇದೀಗ ಬಿಸಿಸಿಐ ಹೇಳುತ್ತಿರುವುದೇ ಬೇರೆ...ಏಕೆಂದರೆ ಟೀಮ್ ಇಂಡಿಯಾ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಸರಣಿಯಿಂದ ಗಾಯದ ಕಾರಣ ಹೊರಗುಳಿದ ಬಳಿಕವಷ್ಟೇ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾದ ಬಯೋ ಬಬಲ್ ಸೇರಿಕೊಂಡಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3 / 6
ಈ ವಿಚಾರವನ್ನು ಬಿಸಿಸಿಐ ಕೂಡ ಗಂಭೀರವಾಗಿ ಪರಿಗಣಿಸಿದೆ. ಕೊಹ್ಲಿ ಹಾಗೂ ರೋಹಿತ್ ನಡುವಣ ಬಿರುಕಿನಿಂದಾಗಿ ಬಿಸಿಸಿಐ ಕೂಡ ಸಂತುಷ್ಟವಾಗಿಲ್ಲ. ಹೀಗಾಗಿ ಇಬ್ಬರನ್ನು ಕೂರಿಸಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಬಿಸಿಸಿಐ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಜೊತೆಯಾಗಿ ಕೂರಿಸಿ ಚರ್ಚೆ ನಡೆಸಲಿದೆ ಎಂದು ಬಿಸಿಸಿಐ ಅಧಿಕಾರಿ ಬಹಿರಂಗಪಡಿಸಿದ್ದಾರೆ.
4 / 6
ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿರುವುದನ್ನು ವಿರಾಟ್ ಕೊಹ್ಲಿ ಲಘುವಾಗಿ ತೆಗೆದುಕೊಂಡಿಲ್ಲ. ಅವರು ಕೌಟುಂಬಿಕ ಕಾರಣಗಳಿಗಾಗಿ ಒಪ್ಪಿಗೆ ಸೂಚಿಸಿದ್ದಾರಷ್ಟೇ. ಇಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿದೆ. ಇದೆಲ್ಲವೂ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
5 / 6
ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿರುವುದು ತಂಡದ ಒಳಿತಿಗಾಗಿ ಅಷ್ಟೇ. ಇದಾಗ್ಯೂ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಸ್ವಾರ್ಥದಿಂದ ಪ್ರತಿಕ್ರಿಯಿಸಬಾರದಿತ್ತು. ಅವರು ತಂಡಕ್ಕಾಗಿ ತುಂಬಾ ಕೊಡುಗೆ ನೀಡಿದ್ದಾರೆ. ಆದರೆ ಈಗ ನಡೆಯುತ್ತಿರುವುದು ತುಂಬಾ ದುರದೃಷ್ಟಕರ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದರು.
6 / 6
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ಅತ್ಯುತ್ತಮ ಆಟಗಾರರಾಗಿದ್ದು, ಎಲ್ಲಾ ಮೂರು ಸ್ವರೂಪಗಳಲ್ಲಿ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ತಂಡದ ಒಳಿತಿಗಾಗಿ ಇಬ್ಬರೂ ಜೊತೆಯಾಗಬೇಕು. ಇದಕ್ಕಾಗಿ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಇಬ್ಬರೊಂದಿಗೆ ಬಿಸಿಸಿಐ ಚರ್ಚೆ ನಡೆಸಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಂತು ಸ್ಪಷ್ಟವಾಗಿದೆ.