
ಮಯಾಂಕ್ ಯಾದವ್, ಐಪಿಎಲ್ನಲ್ಲಿ ಆಡಿದ್ದು 4 ಪಂದ್ಯಗಳು. ಈ ನಾಲ್ಕು ಪಂದ್ಯಗಳಲ್ಲಿ 150+ ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈ ಸಂಚಲನದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಅವಕಾಶ ಲಭಿಸಿತು. ಭಾರತ ಪರ 3 ಟಿ20 ಪಂದ್ಯಗಳನ್ನಾಡಿದ ಬಳಿಕ ಮಯಾಂಕ್ ಯಾದವ್ ಗಾಯಗೊಂಡು ತೆರೆಮರೆಗೆ ಸರಿದರು.

ಆ ಬಳಿಕ ಅವರೇನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಭಾರತ ತಂಡದಿಂದ ಹೊರಗುಳಿದಿರುವ ಆಟಗಾರರು ಐಪಿಎಲ್ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಮಯಾಂಕ್ ಯಾದವ್ ಅವರ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರನಾಗಿರುವ ಮಯಾಂಕ್ ಯಾದವ್ ಮುಂಬರುವ ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯನ್ನು LSG ಮೆಂಟರ್ ಝಹೀರ್ ಖಾನ್ ಅವರ ಮುಂದಿಡಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಝಹೀರ್ ಖಾನ್, ಅವರು ಇನ್ನೂ ಕೂಡ ಚೇತರಿಕೆಯ ಹಂತದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಮಯಾಂಕ್ ಯಾದವ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ಫಿಟ್ನೆಸ್ಗಾಗಿ ಶ್ರಮಿಸುತ್ತಿದ್ದಾರೆ. ಅವರು ಎಲ್‌ಎಸ್‌ಜಿ ತಂಡಕ್ಕೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್‌ಗೂ ಸಹ ಮುಖ್ಯ. ಉತ್ತಮ ಸಾಮರ್ಥ್ಯದ ಬೌಲರ್ ದೀರ್ಘಕಾಲದವರೆಗೆ ಸ್ಥಿರವಾಗಿ ಆಡಬೇಕು ಎಂಬುದು ನಮ್ಮೆಲ್ಲರ ಬಯಕೆ. ಹೀಗಾಗಿ ಸಂಪೂರ್ಣ ಫಿಟ್ನೆಸ್ ಸಾಧಿಸಿದ ಬಳಿಕ ಕಣಕ್ಕಿಳಿಯಬೇಕೆಂದು ನಾನು ಬಯಸುತ್ತೇನೆ ಎಂದು ಝಹೀರ್ ಖಾನ್ ತಿಳಿಸಿದ್ದಾರೆ.

ಮಯಾಂಕ್ ಯಾದವ್ ಅವರಿಗೆ ಹೆಚ್ಚು ಕಾಲ ಆಡಲು ಉತ್ತಮ ವಾತಾವರಣವನ್ನು ನಿರ್ಮಿಸುತ್ತಿದ್ದೇನೆ. ಅವರು 150% ಫಿಟ್ ಆಗಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ಅವರನ್ನು ಉತ್ತಮ ಫಿಟ್‌ನೆಸ್‌ಗೆ ತರಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಝಹೀರ್ ಖಾನ್ ಹೇಳಿದ್ದಾರೆ.

ಈ ಮೂಲಕ ಸಂಪೂರ್ಣ ಫಿಟ್ನೆಸ್ನೊಂದಿಗೆ ಮಯಾಂಕ್ ಯಾದವ್ ಮುಂಬರುವ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯುವ ವಿಶ್ವಾಸವನ್ನು ಝಹೀರ್ ಖಾನ್ ವ್ಯಕ್ತಪಡಿಸಿದ್ದಾರೆ. ಅದರಂತೆ ಐಪಿಎಲ್ ಸೀಸನ್-18 ರಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಕಡೆಯಿಂದ ಬೆಂಕಿ ಚೆಂಡುಗಳು ತೂರಿ ಬರುವುದನ್ನು ಎದುರು ನೋಡಬಹುದು.