ಐಸಿಸಿ ಟಿ20 ವಿಶ್ವಕಪ್ 2022 ಆಡಲು ಶ್ರೀಲಂಕಾ ಕ್ರಿಕೆಟ್ ತಂಡದ ಪರ ಆಸ್ಟ್ರೇಲಿಯಕ್ಕೆ ತೆರಳಿದ್ದ ಸ್ಟಾರ್ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಆಸ್ಟ್ರೇಲಿಯ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ. ಪೊಲೀಸರು ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಲ್ಲಿರುವ ಟೀಮ್ ಹೋಟೆಲ್ ನಿಂದ ಭಾನುವಾರ ಮುಂಜಾನೆ ಗುಣತಿಲಕ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಖಚಿತ ಪಡಿಸಿದ್ದು, ಕಳೆದ ವಾರ ಸಿಡ್ನಿಯಲ್ಲಿ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕಾಲಮಾಆನದ ಪ್ರಕಾರ ಭಾನುವಾರ ದನುಷ್ಕಾ ಗುಣತಿಲಕ ತಂಗಿದ್ದ ಹೋಟೆಲ್ ನಿಂದ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಈ ಬಗ್ಗೆ ಪರಿಶೀಲಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬರೆದುಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅತ್ಯಾಚಾರದ ಆರೋಪದಡಿ ದನುಷ್ಕಾ ಗುಣತಿಲಕ ಅವರನ್ನು ಬಂಧಿಸಲಾಗಿದೆ. ಇದೀಗ ಶ್ರೀಲಂಕಾದ ತಂಡ ಗುಣತಿಲಕ ಅವರನ್ನು ಬಿಟ್ಟು, ತವರಿಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ.
ಆನ್ಲೈನ್ನಲ್ಲಿರುವ ಡೇಟಿಂಗ್ ಅಪ್ಲಿಕೇಶನ್ನ ಮೂಲಕ ಅನೇಕ ದಿನಗಳ ಕಾಲ ಗುಣತಿಲಕ ಅವರು ಮಹಿಳೆ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ಅವರು ನವೆಂಬರ್ 2ರ ಸಂಜೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ.
ಹೆಚ್ಚಿನ ವಿಚಾರಣೆಗಾಗಿ ಭಾನುವಾರ ಮುಂಜಾನೆ ದನುಷ್ಕಾ ಅವರನ್ನು ಬಂಧಿಸಲಾಗಿದೆ. ಅವರನ್ನು ಸಿಡ್ನಿ ಸಿಟಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ನಡೆಸಿದ ಆರೋಪ ಹೊರಿಸಲಾಗಿದೆ. ಸಿಡ್ನಿಯ ನ್ಯಾಯಾಲಯ ದನುಷ್ಕಾಗೆ ಜಾಮೀನು ಕೂಡ ನಿರಾಕರಿಸಿದೆ ಎಂದು ವರದಿಯಾಗಿದೆ.
29 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರು ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಕ್ರಿಕೆಟ್ ತಂಡದ ಹೋಟೆಲ್‌ನಿಂದ ಗುಣತಿಲಕ ಬಂಧಿಸಿದರು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಶನಿವಾರ ಅಪರಾಧ ನಡೆದ ಸ್ಥಳವನ್ನು ಕೂಡ ಪರಿಶೀಲಿಸಿದ್ದಾರೆ.
2015ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ದನುಷ್ಕಾ ಗುಣತಿಲಕ ಈ ಬಾರಿ ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದರು. ಹೀಗಿದ್ದರೂ ಆಸ್ಟ್ರೇಲಿಯಾದಲ್ಲಿ ಶ್ರೀಲಂಕಾ ತಂಡದೊಂದಿಗೆ ನೆಲೆಸಿದ್ದರು.
Published On - 10:40 am, Sun, 6 November 22