Updated on: Dec 13, 2021 | 3:25 PM
BWF ವಿಶ್ವ ಚಾಂಪಿಯನ್‌ಶಿಪ್ 2021 ಡಿಸೆಂಬರ್ 12 ಭಾನುವಾರದಿಂದ ಸ್ಪೇನ್‌ನ ಹುಯೆಲ್ವಾದಲ್ಲಿ ಪ್ರಾರಂಭವಾಗಿದೆ. ಪಂದ್ಯಾವಳಿಯ ಮೊದಲ ದಿನವು ಭಾರತಕ್ಕೆ ವಿಶೇಷವಾಗಿ ಉತ್ತಮವಾಗಿಲ್ಲ. ಕಳೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಕಂಚಿನ ಪದಕ ಗೆದ್ದಿದ್ದ ಬಿ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಹೊರಬಿದ್ದರು. 14ನೇ ಶ್ರೇಯಾಂಕದ ಪ್ರಣೀತ್ ಅವರು ಶ್ರೇಯಾಂಕ ರಹಿತ ನೆದರ್ಲೆಂಡ್ಸ್‌ನ ಮಾರ್ಕ್ ಕಾಲ್ಜೋವ್ ವಿರುದ್ಧ 17-21, 21-7, 21-18 ರ ಬಿಗಿಯಾದ ಪಂದ್ಯದಲ್ಲಿ ಸೋಲನುಭವಿಸಿದರು.
ಪ್ರಣೀತ್ ಮಾತ್ರವಲ್ಲ, ಡಬಲ್ಸ್‌ನಲ್ಲೂ ಆರಂಭ ಉತ್ತಮವಾಗಿರಲಿಲ್ಲ. ಮಹಿಳೆಯರ ಡಬಲ್ಸ್‌ನಲ್ಲಿ ಪೂಜಾ ದಂಡು ಮತ್ತು ಸಂಜನಾ ಸಂತೋಷ್ ಜೋಡಿ ಮೊದಲ ಗೇಮ್‌ನಲ್ಲಿ 12-21ರಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿಯನ್ನು ಡೆನ್ಮಾರ್ಕ್‌ನ ಜೋಯಲ್ ಈಪ್ ಮತ್ತು ರಾಸ್ಮಸ್ ಕೇಯರ್ ಮೊದಲ ಸುತ್ತಿನಲ್ಲಿ 21-16, 21-15 ಸೆಟ್‌ಗಳಿಂದ ಸೋಲಿಸಿದರು.
ಭಾರತದ ದಿನದ ಏಕೈಕ ಪ್ರಗತಿಯು ಕಿಡಂಬಿ ಶ್ರೀಕಾಂತ್ ಅವರ ರೂಪದಲ್ಲಿ ಬಂದಿತು. 12ನೇ ಶ್ರೇಯಾಂಕದ ಕಿಡಂಬಿ ಸ್ಪೇನ್‌ನ ಪಾಬ್ಲೊ ಅಬಿಯಾನ್ ಅವರನ್ನು 21-12, 21-16 ರಿಂದ ಸುಲಭವಾಗಿ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು, ಅಲ್ಲಿ ಅವರು ಚೀನಾದ ಲಿ ಶಿ ಫೆಂಗ್ ಅವರನ್ನು ಎದುರಿಸಲಿದ್ದಾರೆ.
ಭಾರತಕ್ಕೆ, ಡಿಸೆಂಬರ್ 13 ಸೋಮವಾರದ ಎರಡನೇ ದಿನದಲ್ಲಿ, ಪುರುಷರ ಸಿಂಗಲ್ಸ್‌ನ ಅನುಭವಿ ಶಟ್ಲರ್ ಎಚ್‌ಎಸ್ ಪ್ರಣಯ್ ಮೇಲೆ ಹೆಚ್ಚಿನ ಭರವಸೆ ಇದೆ. ಶ್ರೇಯಾಂಕ ರಹಿತ ಆಟಗಾರ ಪ್ರಣಯ್ 8ನೇ ಶ್ರೇಯಾಂಕದ ಹಾಂಕಾಂಗ್ ಕೆ ಕಾ ಲಾಂಗ್ ಆಂಗಸ್ ವಿರುದ್ಧ ಸೆಣಸಲಿದ್ದಾರೆ. ಅವರುಗಳಲ್ಲದೆ ಮಿಶ್ರ ಡಬಲ್ಸ್ ಪಂದ್ಯಗಳೂ ನಡೆಯಲಿವೆ. ಅದೇ ಸಮಯದಲ್ಲಿ, ಟೂರ್ನಿಯಲ್ಲಿ ಭಾರತದ ದೊಡ್ಡ ಭರವಸೆ ಮತ್ತು ಮಹಿಳಾ ಸಿಂಗಲ್ಸ್‌ನ ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಮಂಗಳವಾರ ಎರಡನೇ ಸುತ್ತಿನಲ್ಲಿ ನೇರವಾಗಿ ಎದುರಿಸಲಿದ್ದಾರೆ. ಹಾಗಾಗಿ ಅಭಿಮಾನಿಗಳು ಸ್ವಲ್ಪ ದಿನ ಕಾಯಲೇಬೇಕು.