- Kannada News Photo gallery Cricket photos Champions Trophy 2025 is likely to be moved to South Africa.
ಗೊಡ್ಡು ಬೆದರಿಕೆಯೊಡ್ಡಿ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ್: ನಾವು ರೆಡಿ ಎಂದ ಸೌತ್ ಆಫ್ರಿಕಾ
Champions trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕೈಯಲ್ಲಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ತಂಡ ತೆರಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಹೀಗಾಗಿಯೇ ಇದೀಗ ಟೂರ್ನಿಯ ಆಯೋಜನೆಯಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
Updated on: Nov 12, 2024 | 12:00 PM

2025ರ ಚಾಂಪಿಯನ್ಸ್ ಟ್ರೋಫಿ ಎಲ್ಲಿ ನಡೆಯಲಿದೆ ಎಂಬುದೇ ಈಗ ಪ್ರಶ್ನೆ. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕನ್ನು ಹೊಂದಿರುವ ಪಾಕಿಸ್ತಾನಕ್ಕೆ ಇದೀಗ ಆತಿಥ್ಯದ ಹಕ್ಕು ಕೈ ತಪ್ಪುವ ಭೀತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನದಲ್ಲಿ ಆಡಲು ಟೀಮ್ ಇಂಡಿಯಾ ಹಿಂದೇಟು ಹಾಕಿರುವುದು.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ಹಕ್ಕು ಪಾಕ್ ಕ್ರಿಕೆಟ್ ಮಂಡಳಿಯ ಕೈಯಲ್ಲಿದ್ದು, ಆದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಬೇಕಾದ ಅನಿವಾರ್ಯತೆ ಪಿಸಿಬಿ ಮುಂದಿದೆ.

ಆದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ಪಾಕ್ನಲ್ಲೇ ಟೂರ್ನಿ ಆಯೋಜಿಸುವುದಾಗಿ ಪಟ್ಟು ಹಿಡಿದಿದೆ. ಆದರೆ ಪಾಕಿಸ್ತಾನದಲ್ಲಿ ಪಂದ್ಯಾವಳಿ ನಡೆದರೆ, ಭಾರತ ತಂಡ ಹಿಂದೆ ಸರಿಯುವುದು ಖಚಿತ. ಹೀಗಾಗಿಯೇ ಇದೀಗ ಐಸಿಸಿ ಪರ್ಯಾಯ ಮಾರ್ಗಗಳನ್ನು ಎದುರು ನೋಡುತ್ತಿದೆ.

ಇತ್ತ ಪಾಕಿಸ್ತಾನ್ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸದಿದ್ದರೆ, ಟೂರ್ನಿಯು ಬೇರೊಂದು ದೇಶಕ್ಕೆ ಸ್ಥಳಾಂತರವಾಗುವುದು ಖಚಿತ. ಈ ಅವಕಾಶವನ್ನು ಬಳಸಿಕೊಳ್ಳಲು ಇದೀಗ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕಾಗಿ ತೆರೆಮರೆಯಲ್ಲೇ ಪ್ರಯತ್ನ ಆರಂಭಿಸಿದೆ. ಇತ್ತ ಪಾಕಿಸ್ತಾನ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸದಿದ್ದರೆ, ಚಾಂಪಿಯನ್ಸ್ ಟ್ರೋಫಿಯನ್ನು ನಾವು ಆಯೋಜಿಸುತ್ತೇವೆ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಐಸಿಸಿಗೆ ತಿಳಿಸಿದೆ.

ಅತ್ತ ಭಾರತ ತಂಡವು ಪಾಕಿಸ್ತಾನಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಇದೀಗ ಹೊಸ ಚಿಂತೆ ಶುರುವಾಗಿದೆ. ಏಕೆಂದರೆ ಪಿಸಿಬಿ ಹಿಂದೆ ಸರಿಯುವ ಮುನ್ನವೇ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಟೂರ್ನಿ ಆಯೋಜನೆಗೆ ಆಸಕ್ತಿ ವ್ಯಕ್ತಪಡಿಸಿದ್ದು, ಇದರಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಸಂಪೂರ್ಣ ಟೂರ್ನಿ ಕೈ ತಪ್ಪುವ ಆತಂಕ ಎದುರಾಗಿದೆ.

ಹೀಗಾಗಿ ಹೈಬ್ರಿಡ್ ಮಾದರಿಯಲ್ಲೇ ಟೂರ್ನಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಬಹುದು. ಒಂದು ವೇಳೆ ಐಸಿಸಿ ಸೂಚಿಸಿರುವ ಹೈಬ್ರಿಡ್ ಮಾದರಿಯನ್ನು ಪಾಕಿಸ್ತಾನ್ ಒಪ್ಪದಿದ್ದರೆ, ಇಡೀ ಟೂರ್ನಿ ಸೌತ್ ಆಫ್ರಿಕಾಗೆ ಶಿಫ್ಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಅಂದರೆ ಗೊಡ್ಡು ಬೆದರಿಕೆಗಳನ್ನು ಒಡ್ಡಿ ಇದೀಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯೇ ಖುದ್ದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
























