ಭಾರತ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಅಡಿದ ರೋಹಿತ್ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
2002 ಮತ್ತು 2013 ರ ನಂತರ ಭಾರತವು ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ವಾಸ್ತವವಾಗಿ ಬೇರೆ ಯಾವುದೇ ತಂಡಕ್ಕೂ ಚಾಂಪಿಯನ್ಸ್ ಟ್ರೋಫಿಯನ್ನು ಮೂರು ಬಾರಿ ಗೆಲ್ಲಲು ಸಾಧ್ಯವಾಗಿಲ್ಲ. ಇದರರ್ಥ ಅಧಿಕ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎಂಬ ಇತಿಹಾಸವನ್ನು ಟೀಂ ಇಂಡಿಯಾ ಬರೆದಿದೆ.
ಕೇವಲ 9 ತಿಂಗಳುಗಳ ಅಂತರದಲ್ಲಿ ಎರಡನೇ ಐಸಿಸಿ ಟ್ರೋಫಿಯನ್ನು ತನ್ನ ಖಾತೆಗೆ ಹಾಕಿಕೊಂಡಿರುವ ರೋಹಿತ್ ಪಡೆಗೆ ಐಸಿಸಿಯಿಂದ ಭಾರಿ ಮೊತ್ತವನ್ನು ಬಹುಮಾನವನ್ನಾಗಿ ನೀಡಲಾಗಿದೆ. ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತ ತಂಡಕ್ಕ 2.4 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸರಿಸುಮಾರು 19.5 ಕೋಟಿ ರೂ. ಬಹುಮಾನವಾಗಿ ಸಿಗಲಿದೆ.
ಹಾಗೆಯೇ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ನ್ಯೂಜಿಲೆಂಡ್ ತಂಡಕ್ಕೆ $1.12 ಮಿಲಿಯನ್ ಅಂದರೆ ಸುಮಾರು 9.72 ಕೋಟಿ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಹಾಗೆಯೇ ಸೆಮಿಫೈನಲ್‌ನಲ್ಲಿ ಹೊರಬಿದ್ದ ಎರಡೂ ತಂಡಗಳಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ 4.86 ಕೋಟಿ ರೂ ಹಣ ಸಿಗಲಿದೆ.
ಸುಮಾರು 60 ಕೋಟಿ ರೂಗಳು ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಗಾತ್ರವಾಗಿದ್ದು, ಚಾಂಪಿಯನ್, ರನ್ನರ್ ಅಪ್ ಹಾಗೂ ಸೆಮಿಫೈನಲ್ನಿಂದ ಹೊರಬಿದ್ದ ತಂಡಗಳನ್ನು ಹೊರತುಪಡಿಸಿ, ಗುಂಪು ಹಂತದಲ್ಲಿ ಪ್ರತಿ ಪಂದ್ಯದ ಗೆಲುವಿಗೆ 30 ಲಕ್ಷ ರೂ. ಬಹುಮಾನ ದೊರೆಯಲಿದೆ.
ಟೂರ್ನಿಯಲ್ಲಿ ಐದು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸುಮಾರು 3 ಕೋಟಿ ರೂ. ಬಹುಮಾನ ಪಡೆದರೆ, ಏಳು ಮತ್ತು ಎಂಟನೇ ಸ್ಥಾನ ಪಡೆದ ತಂಡಗಳು ಸುಮಾರು 1.2 ಕೋಟಿ ರೂ ಮೊತ್ತವನ್ನು ಪಡೆಯಲಿದೆ. ಇದಲ್ಲದೆ, ಈ ಐಸಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಎಂಟು ತಂಡಗಳಿಗೆ ತಲಾ 1.08 ಕೋಟಿ ರೂ ಹಣ ಸಿಗಲಿದೆ.