- Kannada News Photo gallery Cricket photos Harry Brook pulls out of IPL 2025, could face 2 year ban from IPL
IPL 2025: ಐಪಿಎಲ್ನಿಂದ ಹ್ಯಾರಿ ಬ್ರೂಕ್ 2 ವರ್ಷ ಬ್ಯಾನ್
IPL 2025 Harry Brook: ಇಂಡಿಯನ್ ಪ್ರೀಮಿಯರ್ ಲೀಗ್ಗೆ (ಐಪಿಎಲ್) ಆಯ್ಕೆಯಾದ ಆಟಗಾರರು ಟೂರ್ನಿ ಆಡುವುದು ಕಡ್ಡಾಯ. ಅಂದರೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ ಐಪಿಎಲ್ನಿಂದ ಹಿಂದೆ ಸರಿಯುವಂತಿಲ್ಲ. ಒಂದು ವೇಳೆ ವಿನಾಕಾರಣ ಟೂರ್ನಿಗೆ ಅಲಭ್ಯರಾದರೆ ಅವರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಅದರಂತೆ ಇದೀಗ ಹ್ಯಾರಿ ಬ್ರೂಕ್ ಬ್ಯಾನ್ಗೆ ಒಳಗಾಗಿದ್ದಾರೆ.
Updated on: Mar 10, 2025 | 11:31 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಿಂದ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಹಿಂದೆ ಸರಿದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ಗಾಗಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಬ್ರೂಕ್ ಈ ಬಾರಿಯ ಐಪಿಎಲ್ಗೆ ಅಲಭ್ಯರಾಗುವುದಾಗಿ ತಿಳಿಸಿದ್ದಾರೆ.

ಹ್ಯಾರಿ ಬ್ರೂಕ್ ಅವರ ಈ ನಿರ್ಧಾರವೇ ಇದೀಗ ಅವರಿಗೆ ಮುಳುವಾಗಲಿದೆ. ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ನ ಹೊಸ ನಿಯಮದ ಪ್ರಕಾರ, ಐಪಿಎಲ್ ಮೆಗಾ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ.

ಇಂತಹದೊಂದು ನಿಯಮ ಜಾರಿಗೊಳಿಸಲು ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಹೊಸ ನಿಯಮವನ್ನು ಪರಿಚಯಿಸಿದೆ.

ಅದರಂತೆ ಈ ಬಾರಿಯ ಐಪಿಎಲ್ನ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬರೋಬ್ಬರಿ 6.25 ಕೋಟಿ ರೂ.ಗೆ ಖದೀಸಿತ್ತು. ಇದೀಗ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಬ್ರೂಕ್ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ.

ಹೀಗಾಗಿ ಹ್ಯಾರಿ ಬ್ರೂಕ್ ಇನ್ನು ಎರಡು ವರ್ಷಗಳ ಕಾಲ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಅದರಂತೆ ಐಪಿಎಲ್ 2026 ಮತ್ತು 2027 ರ ಹರಾಜಿಗೆ ಇಂಗ್ಲೆಂಡ್ ಆಟಗಾರನನ್ನು ಪರಿಣಿಸಲಾಗುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಹ್ಯಾರಿ ಬ್ರೂಕ್ ಮತ್ತೆ ಐಪಿಎಲ್ ಆಡಬೇಕೆಂದರೆ 2028 ರವರೆಗೆ ಕಾಯಲೇಬೇಕು.
