2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಪಂದ್ಯಾವಳಿಯೂ ಕೊನೆಗೊಂಡಿತು. ಇತ್ತ ಫೈನಲ್ ಪಂದ್ಯದಲ್ಲಿ ಸೋತರೂ, ಕಿವೀಸ್ ತಂಡದ ಆರಂಭಿಕ ಆಟಗಾರ ರಚಿನ್ ರವೀಂದ್ರ ಇಡೀ ಟೂರ್ನಿಯ ಹೀರೋ ಆಗಿ ಹೊರಹೊಮ್ಮಿದರು.
ಕಿವೀಸ್ ಪರ ಇಡೀ ಪಂದ್ಯಾವಳಿಯ ಉದ್ದಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ರಚಿನ್ಗೆ ಗೋಲ್ಡನ್ ಬ್ಯಾಟ್ ಸಿಕ್ಕಿದೆ. ಇಡೀ ಪಂದ್ಯಾವಳಿಯಲ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ 263 ರನ್ ಕಲೆಹಾಕಿದ ರಚಿನ್ ರವೀಂದ್ರ, ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಗೋಲ್ಡನ್ ಬ್ಯಾಟ್ ನೀಡಲಾಗುತ್ತದೆ. ಆ ಪ್ರಕಾರ, ಅತಿ ಹೆಚ್ಚು ರನ್ ಬಾರಿಸಿದ ರಚಿನ್ಗೆ ಗೋಲ್ಡನ್ ಬ್ಯಾಟ್ ಸಿಕ್ಕಿದೆ. ಇದು ಮಾತ್ರವಲ್ಲದೆ ಇಡೀ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ರಚಿನ್ಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯೂ ಲಭಿಸಿತು.
ವಾಸ್ತವವಾಗಿ ಗೋಲ್ಡನ್ ಬ್ಯಾಟ್ ರೇಸ್ನಲ್ಲಿ ಭಾರತದ ಇಬ್ಬರು ಬ್ಯಾಟ್ಸ್ಮನ್ಗಳು ಕೂಡ ಇದ್ದರು. ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿಗೆ ಗೋಲ್ಡನ್ ಬ್ಯಾಟ್ ಗೆಲ್ಲುವ ಅವಕಾಶವಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಚಮತ್ಕಾರ ತೋರದ ಈ ಇಬ್ಬರು ಆಟಗಾರರು ಸ್ವಲ್ಪದರಲ್ಲೇ ಗೋಲ್ಡನ್ ಬ್ಯಾಟ್ ಗೆಲ್ಲುವ ಅವಕಾಶದಿಂದ ವಂಚಿತರಾದರು.
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 48 ರನ್ಗಳ ಇನ್ನಿಂಗ್ಸ್ ಅಡಿದ ಶ್ರೇಯಸ್ ಅಯ್ಯರ್ ಕೇವಲ 20 ರನ್ಗಳ ಅಂತರದಿಂದ ಗೋಲ್ಡನ್ ಬ್ಯಾಟ್ ವಂಚಿತರಾದರು. ಅಯ್ಯರ್ ಈ ಟೂರ್ನಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 48.60 ಸರಾಸರಿಯಲ್ಲಿ 243 ರನ್ ಕಲೆಹಾಕಿದರು. ಈ ಪಂದ್ಯಾವಳಿಯಲ್ಲಿ ಅವರು 2 ಅರ್ಧಶತಕಗಳನ್ನು ಬಾರಿಸಿದರು.
ಈ ಇಬ್ಬರನ್ನು ಹೊರತುಪಡಿಸಿ ಆಡಿದ 3 ಇನ್ನಿಂಗ್ಸ್‌ಗಳಲ್ಲಿ 75.66 ಸರಾಸರಿಯಲ್ಲಿ 227 ರನ್ ಗಳಿಸಿದ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ಇಂಗ್ಲೆಂಡ್‌ನ ಜೋ ರೂಟ್ 225 ರನ್‌ಗಳೊಂದಿಗೆ ನಾಲ್ಕನೇ ಸ್ಥಾನ ಹಾಗೂ ವಿರಾಟ್ ಕೊಹ್ಲಿ 218 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.