ಟೀಂ ಇಂಡಿಯಾದ ಮಾಜಿ ಆಟಗಾರ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಲಂಕಾ ಪ್ರೀಮಿಯರ್ ಲೀಗ್ನತ್ತ ಮುಖ ಮಾಡಿದ್ದಾರೆ. ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್ಗಾಗಿ ನಡೆಯಲ್ಲಿರುವ ಹರಾಜಿಗೆ ರೈನಾ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ರೈನಾ ತಮ್ಮ ಮೂಲ ಬೆಲೆಯನ್ನು 50 ಸಾವಿರ ಡಾಲರ್ (41,21,725 ರೂ.)ಗೆ ನಿಗಧಿಪಡಿಸಿದ್ದಾರೆ. ಎಲ್‌ಪಿಎಲ್ ಹರಾಜು ಜೂನ್ 14 ರಂದು ನಡೆಯಲಿದ್ದು. ಈ ಲೀಗ್ನ ನಾಲ್ಕನೇ ಆವೃತ್ತಿಯು ಜೂನ್ 30 ರಿಂದ ಆಗಸ್ಟ್ 20 ರವರೆಗೆ ನಡೆಯಲಿದೆ.
ಸುರೇಶ್ ರೈನಾಗೂ ಮೊದಲು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಏಕೈಕ ಭಾರತೀಯ ಕ್ರಿಕೆಟಿಗರಾಗಿದ್ದಾರೆ. 2020 ರ ಉದ್ಘಾಟನಾ ಸೀಸನ್ನಲ್ಲಿ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಪಠಾಣ್ ಕಣಕ್ಕಳಿದಿದ್ದರು.
ಸೆಪ್ಟೆಂಬರ್ 2022 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೈನಾ, ಈ ವರ್ಷದ ಮಾರ್ಚ್‌ನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕೊನೆಯದಾಗಿ ಆಡಿದ್ದರು. ಇನ್ನು ಐಪಿಎಲ್ನಲ್ಲಿ ಚೆನ್ನೈ ತಂಡದಲ್ಲಿ ಹೆಚ್ಚು ವರ್ಷ ಕಳೆದಿದ್ದ ರೈನಾ ತಂಡವನ್ನು 2010, 2011, 2018, ಮತ್ತು 2021ರಲ್ಲಿ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಪರ 176 ಪಂದ್ಯಗಳನ್ನಾಡಿರುವ ರೈನಾ 4,687 ರನ್ ಸಿಡಿಸಿದ್ದಾರೆ. ಹಾಗೆಯೇ ರೈನಾ 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ನಾಯಕತ್ವವನ್ನು ವಹಿಸಿದ್ದರು. ಒಟ್ಟಾರೆ ಐಪಿಎಲ್ ವೃತ್ತಿಜೀವನದಲ್ಲಿ 5,500 ಕ್ಕೂ ಹೆಚ್ಚು ರನ್ ಗಳಿಸಿದ ಅವರು ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾದ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ರೈನಾ ಪಾತ್ರರಾಗಿದ್ದಾರೆ. 2010 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೈನಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದರು
ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಸುಮಾರು 8,000 ರನ್ ಬಾರಿಸಿರುವ ಸುರೇಶ್ ರೈನಾ, 2011ರ ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಲಂಕಾ ಪ್ರೀಮಿಯರ್ ಲೀಗ್ ಹರಾಜಿನ ವಿಚಾರಕ್ಕೆ ಬಂದರೆ 140 ವಿದೇಶಿ ಕ್ರಿಕೆಟಿಗರು ಸೇರಿದಂತೆ 500 ಕ್ಕೂ ಹೆಚ್ಚು ಕ್ರಿಕೆಟಿಗರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಈಗಾಗಲೇ ಹೇಳಿದೆ. ಈ ವರ್ಷದ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದೆ.