
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಅನ್ಕ್ಯಾಪ್ಡ್ ಪ್ಲೇಯರ್ಸ್ ಎಂಬ ಹೆಗ್ಗಳಿಕೆ ಕಾರ್ತಿಕ್ ಶರ್ಮಾ (Kartik Sharma) ಹಾಗೂ ಪ್ರಶಾಂತ್ ವೀರ್ (Prashant Veer) ಹೆಸರಿಗೆ ಸೇರ್ಪಡೆಯಾಗಿದೆ. ಈ ಇಬ್ಬರು ಯುವ ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 28.4 ಕೋಟಿ ರೂ.ಗೆ ಖರೀದಿಸಿದೆ.

30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಉತ್ತರ ಪ್ರದೇಶದ 20 ವರ್ಷದ ಪ್ರಶಾಂತ್ ವೀರ್ಗಾಗಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಪರಿಣಾಮ ಕ್ಷಣಾರ್ಧದಲ್ಲೇ ಯುವ ಆಲ್ರೌಂಡರ್ನ ಮೌಲ್ಯವು 10 ಕೋಟಿ ರೂ. ದಾಟಿದೆ. ಅಂತಿಮವಾಗಿ ಸಿಎಸ್ಕೆ 14.20 ಕೋಟಿ ರೂ.ಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಅವರ ಖರೀದಿಗೂ ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚಿನ ಆಸಕ್ತಿ ತೋರಿತು. ಆದರೆ ರಾಜಸ್ಥಾನ್ ಮೂಲದ ಸ್ಫೋಟಕ ದಾಂಡಿಗನ ಖರೀದಿಗೆ ಕೆಕೆಆರ್ ಹಾಗೂ ಎಲ್ಎಸ್ಜಿ ಫ್ರಾಂಚೈಸಿಗಳು ಮುಂದಾಗಿದ್ದವು. ಇದರಿಂದ ಬಿಡ್ಡಿಂಗ್ ಪೈಪೋಟಿ ಏರ್ಪಟ್ಟಿದ್ದು, ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 14.20 ಕೋಟಿ ರೂ. ಪಾವತಿಸಿ ಕಾರ್ತಿಕ್ ಶರ್ಮಾ ಅವರನ್ನು ಖರೀದಿಸಿದ್ದಾರೆ.

ಅಂದರೆ ಸಿಎಸ್ಕೆ ಫ್ರಾಂಚೈಸಿಯು ಇನ್ನೂ ಸಹ ರಾಷ್ಟ್ರೀಯ ತಂಡದ ಪರ ಆಡದ ಇಬ್ಬರು ಆಟಗಾರರಿಗಾಗಿ ಬರೋಬ್ಬರಿ 28.4 ಕೋಟಿ ರೂ. ವ್ಯಯಿಸಿದೆ. ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲಿ ಯಾವುದೇ ಅನ್ಕ್ಯಾಪ್ಡ್ ಆಟಗಾರ 10 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಪಡೆದಿರಲಿಲ್ಲ.

ಇದಕ್ಕೂ ಮುನ್ನ ಐಪಿಎಲ್ 2022 ರ ಹರಾಜಿನಲ್ಲಿ ಅನ್ಕ್ಯಾಪ್ಡ್ ಆಗಿದ್ದ ಅವೇಶ್ ಖಾನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 10 ಕೋಟಿ ರೂ.ಗೆ ಖರೀದಿಸಿದ್ದೇ ಗರಿಷ್ಠ ಮೊತ್ತ. ಆದರೆ ಈ ಬಾರಿ ಇಬ್ಬರು ಆಟಗಾರರಿಗೆ ತಲಾ 14.20 ಕೋಟಿ ರೂ. ವ್ಯಯಿಸಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

CSK ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮೀ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಜ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.