IPL 2026: RCB ತಂಡದ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ
IPL 2026 RCB Playing XI: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 2026ರ ಹರಾಜಿಗೂ ಮುನ್ನ 17 ಆಟಗಾರರನ್ನು ರಿಟೈನ್ ಮಾಡಿ ಕೊಂಡಿದ್ದರು. ಇದೀಗ ಮಿನಿ ಹರಾಜಿನ ಮೂಲಕ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಐಪಿಎಲ್ ಸೀಸನ್-19 ಗಾಗಿ 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ.
Updated on: Dec 17, 2025 | 2:53 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 25 ಸದಸ್ಯರುಗಳ ಬಲಿಷ್ಠ ತಂಡವನ್ನು ರೂಪಿಸಿದೆ. ಕಳೆದ ಬಾರಿ ತಂಡದಲ್ಲಿ 17 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದ ಆರ್ಸಿಬಿ ಈ ಬಾರಿ 8 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಮುಂದಿನ ಸೀಸನ್ಗಾಗಿ ತಂಡವನ್ನು ಬಲಿಷ್ಠಗೊಳಿಸಿದೆ.

ಇದೀಗ 25 ಸದಸ್ಯರುಗಳ ಬಲಿಷ್ಠ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಳೆದ ಸೀಸನ್ನಲ್ಲಿ ಕಣಕ್ಕಿಳಿದ 10 ಆಟಗಾರರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇನ್ನು ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಐಪಿಎಲ್ ಅಭಿಯಾನ ಆರಂಭಿಸುವ ಸಾಧ್ಯತೆಯಿದೆ. ಅದರಂತೆ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂದು ನೋಡುವುದಾದರೆ....

ಫಿಲ್ ಸಾಲ್ಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಈ ಬಾರಿ ಕೂಡ ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದ್ದ ಸಾಲ್ಟ್ ಈ ಬಾರಿ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ: ಫಿಲ್ ಸಾಲ್ಟ್ ಜೊತೆ ಆರಂಭಿಕನಾಗಿ ವಿರಾಟ್ ಕೊಹ್ಲಿ ಮುಂದುವರೆಯುವುದು ಖಚಿತ. ಏಕೆಂದರೆ ಕಳೆದ ಸೀಸನ್ನಲ್ಲಿ ಸಾಲ್ಟ್-ಕೊಹ್ಲಿ ಜೋಡಿ ಆರ್ಸಿಬಿ ಪಡೆಗೆ ಅತ್ಯುತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಜೋಡಿಯನ್ನೇ ಈ ಬಾರಿ ಕೂಡ ಮುಂದುವರೆಸಲಿದ್ದಾರೆ.

ವೆಂಕಟೇಶ್ ಅಯ್ಯರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ವೆಂಕಟೇಶ್ ಅಯ್ಯರ್ ಮೂರನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್ನಲ್ಲಿ ದೇವತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಆದರೆ ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಆಗಿರುವ ಕಾರಣ ಅವರಿಗೆ ಈ ಬಾರಿ ಅವಕಾಶ ಸಿಗಲಿದೆ.

ರಜತ್ ಪಾಟಿದಾರ್: ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಈ ಹಿಂದಿನಂತೆ ನಾಲ್ಕನೇ ಕ್ರಮಾಂಕದಲ್ಲಿ ಮುಂದುವರೆಯಲಿದ್ದಾರೆ. ಪಾಟಿದಾರ್ ಕಳೆದ ಸೀಸನ್ನಲ್ಲೂ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಹೀಗಾಗಿ ಅವರ ಕ್ರಮಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಜಿತೇಶ್ ಶರ್ಮಾ: ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಕಣಕ್ಕಿಳಿಯುವುದು ಖಚಿತ. ಕಳೆದ ಸೀಸನ್ನಲ್ಲಿ ಯಶಸ್ವಿ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದ ಜಿತೇಶ್ ಶರ್ಮಾ ಅವರು ಮುಂದಿನ ಸೀಸನ್ನಲ್ಲೂ ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿದ್ದಾರೆ.

ಕೃನಾಲ್ ಪಾಂಡ್ಯ: ಅನುಭವಿ ಸ್ಪಿನ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಆಡುವ ಬಳಗದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಆರ್ಸಿಬಿ ತಂಡ ಕಳೆದ ಸೀಸನ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಕೃನಾಲ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಅವರು ಸಹ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿಯಲಿದ್ದಾರೆ.

ಟಿಮ್ ಡೇವಿಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫನಿಶರ್ ಪಾತ್ರದಲ್ಲಿ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್ನಲ್ಲಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಟಿಮ್ ಡೇವಿಡ್ ಇದೀಗ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಅವರನ್ನು ಸಹ ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡುವುದಿಲ್ಲ.

ರೊಮಾರಿಯೊ ಶೆಫರ್ಡ್: ಆರ್ಸಿಬಿ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ರೊಮಾರಿಯೊ ಶೆಫರ್ಡ್ ಅವರ ಕೊಡುಗೆ ಕೂಡ ಇದೆ. ಅದರಲ್ಲೂ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ನೊಂದಿಗೆ ಪಂದ್ಯ ಚಿತ್ರಣ ಬದಲಿಸಬಲ್ಲ ಬ್ಯಾಟರ್ ಅವರು. ಹೀಗಾಗಿ ಅವರನ್ನು ಸಹ ಆಡುವ ಬಳಗದಲ್ಲಿ ಮುಂದುವರೆಸಲಿದ್ದಾರೆ.

ಜೋಶ್ ಹೇಝಲ್ವುಡ್: ಆರ್ಸಿಬಿ ತಂಡದ ಪ್ರಮುಖ ವೇಗಿಯಾಗಿ ಜೋಶ್ ಹೇಝಲ್ವುಡ್ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಹೇಝಲ್ವುಡ್ ಐಪಿಎಲ್ ವೇಳೆಗೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಲಿದ್ದಾರೆ. ಹೀಗಾಗಿ ಅವರು ಸಹ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭುವನೇಶ್ವರ್ ಕುಮಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮುಂದಿನ ಸೀಸನ್ನಲ್ಲೂ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಹೇಝಲ್ವುಡ್ ಜೊತೆ ಅತ್ಯುತ್ತಮ ದಾಳಿ ಸಂಘಟಿಸಿದ್ದ ಭುವಿ ಎಲ್ಲಾ ಪಂದ್ಯಗಳಲ್ಲೂ ಕಾಣಿಸಿಕೊಳ್ಳುವುದು ಖಚಿತ.

ಯಶ್ ದಯಾಳ್: ಆರ್ಸಿಬಿ ಎಡಗೈ ವೇಗಿಯನ್ನು ಕಣಕ್ಕಿಳಿಸಲು ಮುಂದಾದರೆ ಯಶ್ ದಯಾಳ್ಗೆ ಚಾನ್ಸ್ ಸಿಗುವುದು ಖಚಿತ. ಇನ್ನು ಹೆಚ್ಚುವರಿ ಸ್ಪಿನ್ನರ್ನ ಆಯ್ಕೆಗೆ ಮುಂದಾದರೆ ಸುಯಶ್ ಶರ್ಮಾ ಅವರು ಕಣಕ್ಕಿಳಿಯಲಿದ್ದಾರೆ. ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ಇರುವುದರಿಂದ ಯಶ್ ದಯಾಳ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸುಯಶ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು.

RCB ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ದಾರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್, ಜೋರ್ಡನ್ ಕಾಕ್ಸ್, ಜೇಕಬ್ ಡಫಿ, ವಿಕ್ಸಿ ಒಸ್ತ್ವಾಲ್, ಕಾನಿಷ್ಕ್ ಚೌಹಾನ್, ಸತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರ.
