
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಬರೋಬ್ಬರಿ 4 ವರ್ಷ, 9 ತಿಂಗಳುಗಳ ಬಳಿಕ ಏಕದಿನ ಕ್ರಿಕೆಟ್ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಹೀಗೆ ಅಗ್ರಸ್ಥಾನವನ್ನು ಅಲಂಕರಿಸಿದ 7 ಗಂಟೆಯೊಳಗೆ ಕೊಹ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ ಎಂದರೆ ನಂಬಲೇಬೇಕು.

ಇಲ್ಲಿ ಗಂಟೆಗಳ ಒಳಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿರುವುದು ನ್ಯೂಝಿಲೆಂಡ್ನ ಡೇರಿಲ್ ಮಿಚೆಲ್. ಐಸಿಸಿಯ ನೂತನ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 785 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದ್ದರೆ, ಡೇರಿಲ್ ಮಿಚೆಲ್ 784 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು.

ಅತ್ತ ಡೇರಿಲ್ ಮಿಚೆಲ್ಗೆ ಅಗ್ರಸ್ಥಾನಕ್ಕೇರಲು ಕೇವಲ 25 ರನ್ಗಳ ಅವಶ್ಯಕತೆಯಿತ್ತು. ಅಂದರೆ ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಆಟಗಾರ ಅಗ್ರಸ್ಥಾನಕ್ಕೇರುವುದು ಖಚಿತವಾಗಿತ್ತು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಲೆಹಾಕಿದ್ದು ಕೇವಲ 23 ರನ್ಗಳು ಮಾತ್ರ.

ಆದರೆ ಡೇರಿಲ್ ಮಿಚೆಲ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಅಜೇಯ 131 ರನ್ಗಳ ಇನಿಂಗ್ಸ್ ಕೂಡ ಆಡಿದ್ದಾರೆ. ಈ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ತನ್ನ ರೇಟಿಂಗ್ ಅನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಡೇರಿಲ್ ಮಿಚೆಲ್ ಐಸಿಸಿ ಏಕದಿನ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ಇದಾಗ್ಯೂ ಮಂಗಳವಾರದವರೆಗೆ ಡೇರಿಲ್ ಮಿಚೆಲ್ ಅವರ ಹೆಸರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಐಸಿಸಿ ರ್ಯಾಂಕಿಂಗ್ನ ನವೀಕರಣ ಪ್ರತಿ ಬುಧವಾರ ನಡೆಯುತ್ತದೆ. ಹೀಗಾಗಿ ಮಂಗಳವಾರದವರೆಗೆ ರ್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿಯ ಹೆಸರೇ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.

ಅಷ್ಟೇ ಅಲ್ಲದೆ ಭಾನುವಾರ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಇನಿಂಗ್ಸ್ ಆಡಿದರೆ ಡೇರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿ ಬುಧವಾರ ಮತ್ತೆ ಐಸಿಸಿ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಬಹುದು. ಹೀಗಾಗಿ ಭಾನುವಾರದ ಪಂದ್ಯವು ಡೇರಿಲ್ ಮಿಚೆಲ್ ಹಾಗೂ ವಿರಾಟ್ ಕೊಹ್ಲಿ ನಡುವೆ ರ್ಯಾಂಕಿಂಗ್ ಕದನ ಎಂದರೆ ತಪ್ಪಾಗಲಾರದು.