
ಅಬುಧಾಬಿಯಲ್ಲಿ ನಡೆದ ಟಿ10 ಲೀಗ್ನ ಹೊಸ ಚಾಂಪಿಯನ್ ಆಗಿ ಡೆಕ್ಕನ್ ಗ್ಲಾಡಿಯೇಟರ್ಸ್ ಹೊರಹೊಮ್ಮಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಬುಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಆದರೆ ಡೆಲ್ಲಿ ಲೆಕ್ಕಚಾರಗಳನ್ನು ಆರಂಭಿಕರಾದ ಆಂಡ್ರೆ ರಸೆಲ್ ಹಾಗೂ ಕೊಹ್ಲರ್ ತಲೆಕೆಳಗಾಗಿಸಿದರು.

ಬಿರುಸಿನ ಇನಿಂಗ್ಸ್ ಆರಂಭಿಸಿದ ಈ ಜೋಡಿ ಡೆಲ್ಲಿ ಬೌಲರುಗಳ ಬೆಂಡೆತ್ತಿದರು. ಅದರಲ್ಲೂ ರಸೆಲ್ ಅಬ್ಬರವನ್ನು ತಡೆಯಲಾಗಲಿಲ್ಲ. ಸ್ಪೋಟಕ ಬ್ಯಾಟಿಂಗ್ ಮಾಡಿದ ರಸೆಲ್ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಷ್ಟೇ ಅಲ್ಲದೆ 7 ಸಿಕ್ಸ್ ಹಾಗೂ 9 ಬೌಂಡರಿ ಸಿಡಿಸಿದರು.

ಅದರಂತೆ ಅಂತಿಮವಾಗಿ ರಸೆಲ್ 32 ಎಸೆತಗಳಲ್ಲಿ 90 ರನ್ ಬಾರಿಸಿದರೆ, ಕೊಹ್ಲರ್ 28 ಎಸೆತಗಳಲ್ಲಿ 59 ರನ್ ಸಿಡಿಸಿದರು. ಪರಿಣಾಮ ಡೆಕ್ಕನ್ ಗ್ಲಾಡಿಯೇಟರ್ಸ್ 10 ಓವರ್ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 159 ರನ್ ಕಲೆಹಾಕಿತು.

160 ರನ್ಗಳ ಗುರಿ ಬೆನತ್ತಿದ ಡೆಲ್ಲಿ ಬುಲ್ಸ್ ಪರ ಆರಂಭಿಕ ಹೇಮರಾಜ್ ಮಾತ್ರ 42 ರನ್ ಬಾರಿಸಿ ಅಬ್ಬರಿಸಿದರು. ಉಳಿದ ಯಾವುದೇ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಅದರಂತೆ 10 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 103 ರನ್ಗಳಿಸಲಷ್ಟೇ ಶಕ್ತರಾದರು.

ಇತ್ತ 56 ರನ್ಗಳ ಭರ್ಜರಿ ಜಯದೊಂದಿಗೆ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಆಂಡ್ರೆ ರಸೆಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.