ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 4 ಭಾನುವಾರದಂದು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಆದರೆ, ಇದಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಉಂಟಾಗುತ್ತಿದೆ.
ಈಗಾಗಲೇ ಅನುಭವಿ ವೇಗಿ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಜಾಗಕ್ಕೆ ಉಮ್ರಾನ್ ಮಲಿಕ್ ಅವರನ್ನು ಬದಲಿ ಆಟಗಾರನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಆಲ್ರೌಂಡರ್ ದೀಪಕ್ ಚಹರ್ಗೂ ದೊಡ್ಡ ಶಾಕ್ ಉಂಟಾಗಿದೆ.
ದೀಪಕ್ ಚಹರ್ ಏಕದಿನ ಸರಣಿಗಾಗಿ ಬಾಂಗ್ಲಾದೇಶಕ್ಕೆ ಬಂದಿದ್ದಾರೆ. ಆದರೆ, ಇವರ ಲಗೇಜ್ ಇನ್ನೂ ತಲುಪಿಲ್ಲ. ಈ ಬಗ್ಗೆ ಕೋಪಗೊಂಡ ಚಹರ್ ಟ್ವಿಟರ್ನಲ್ಲಿ ತಾವು ಪ್ರಯಾಣಿಸಿದ ಮಲೇಷ್ಯಾ ಏರ್ಲೈನ್ಸ್ನ ಕಳಪೆ ಸೇವೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
''ಮಲೇಷ್ಯಾ ಏರ್ಲೈನ್ಸ್ನಲ್ಲಿ ಪ್ರಯಾಣ ಮಾಡಿದ ನನಗೆ ಕೆಟ್ಟ ಅನುಭವವಾಗಿದೆ. ಮೊದಲಿಗೆ ನಮ್ಮ ಗಮನಕ್ಕೇ ತರದೆ ಫ್ಲೈಟ್ ಅನ್ನು ಬದಲಾಯಿಸಿದರು. ಬ್ಯುಸಿನೆಸ್ ಕ್ಲಾಸ್ನಲ್ಲಿ ಬಂದಿದ್ದರೂ ಯಾವುದೇ ತಿಂಡಿಗಳು ಇರಲಿಲ್ಲ. ಈಗ ಕಳೆದ 24 ಗಂಟೆಗಳಿಂದ ನನ್ನ ಲಗೆಜ್ಗಾಗಿ ಕಾಯುತ್ತಿದ್ದೇನೆ. ಯೋಚಿಸಿ ನಾವು ನಾಳೆ ಮೊದಲ ಏಕದಿನ ಪಂದ್ಯವನ್ನು ಆಡಬೇಕಿದೆ,'' ಎಂದು ಬರೆದುಕೊಂಡಿದ್ದಾರೆ.
ದೀಪಕ್ ಚಹರ್ ಕಿಟ್ ಹಾಗೂ ಎಲ್ಲ ಸಾಮಗ್ರಿಗಳು ಇನ್ನೂ ಅವರ ಕೈಸೇರಿಲ್ಲ. ಹೀಗಾಗಿ ಅಭ್ಯಾಸ ಕೂಡ ಮಾಡಲು ಸಾಧ್ಯವಾಗಿಲ್ಲ. ಇಂದುಕೂಡ ಅವರ ಲಗೆಜ್ ಬಾರದಿದ್ದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಚಹರ್ ಟ್ವೀಟ್ಗೆ ಟ್ವಿಟರ್ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಕೇಳಿಬರುತ್ತಿದೆ.
ದೀಪಕ್ ಚಹರ್ ಟ್ವೀಟ್ ಬೆನ್ನಲ್ಲೇ ಮಲೇಷ್ಯಾ ಏರ್‌ಲೈನ್ಸ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಕ್ಷಮೆ ಕೋರಿದೆ. ''ನಮ್ಮನ್ನು ಸಂಪರ್ಕಿಸಿದ್ದಕ್ಕೆ ಧನ್ಯವಾದ. ನಿಮಗೆ ಈರೀತಿಯ ಅನುಭವ ಆಗಿದ್ದಕ್ಕೆ ಕ್ಷಮೆ ಕೋರುತ್ತೇವೆ. ಮಲೇಷಿಯಾ ಏರ್ಲೈನ್ಸ್ನ ಎಲ್ಲಾ ವಿಮಾನಗಳು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಆದಾಗ್ಯೂ, ನಮ್ಮ ತಂಡದಿಂದ ತಪ್ಪಾಗಿದೆ,'' ಎಂದು ಹೇಳಿದೆ.
ವಿಮಾನದಲ್ಲಿ ಪ್ರಯಾಣಿಸುವವರಿಗೆ ಈರೀತಿಯ ಅನುಭವ ಆಗುತ್ತಿರುವುದು ಇದೇ ಮೊದಲೇನಲ್ಲ. ಸಾಮಾನ್ಯ ಪ್ರಯಾಣಿಕರು ಪ್ರತಿದಿನ ಇಂಥಹ ಸಮಸ್ಯೆ ಎದುರಿಸುತ್ತಾರೆ. ಆದರೆ, ಸೆಲೆಬ್ರಿಟಿಗಳು ಈ ಬಗ್ಗೆ ಧ್ವನಿ ಎತ್ತಿ ಹೇಳಿದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.
ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಧವನ್ರಂತಹ ಸ್ಟಾರ್ ಆಟಗಾರರಿದ್ದಾರೆ. ಈ ಸರಣಿಯಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.
Published On - 12:36 pm, Sat, 3 December 22