
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕದ ಯುವ ದಾಂಡಿಗ ದೇವದತ್ ಪಡಿಕ್ಕಲ್ (Devdutt Padikkal) ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮುಖಾಮುಖಿಯಾಗಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ತಂಡದ ನಾಯಕ ವರುಣ್ ಚಕ್ರವರ್ತಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ (24) ಹಾಗೂ ಶರತ್ ಬಿಆರ್ (53) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ದೇವದತ್ ಪಡಿಕ್ಕಲ್ ತಮಿಳುನಾಡು ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಪಡಿಕ್ಕಲ್ ಬ್ಯಾಟ್ನಿಂದ 6 ಭರ್ಜರಿ ಸಿಕ್ಸರ್ ಹಾಗೂ 10 ಫೋರ್ಗಳು ಮೂಡಿಬಂದವು. ಈ ಮೂಲಕ ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದರು.

ಅಂತಿಮವಾಗಿ 46 ಎಸೆತಗಳನ್ನು ಎದುರಿಸಿದ ದೇವದತ್ ಪಡಿಕ್ಕಲ್ 10 ಫೋರ್ ಹಾಗೂ 6 ಸಿಕ್ಸ್ಗಳೊಂದಿಗೆ ಅಜೇಯ 102 ರನ್ ಬಾರಿಸಿದರು. ಪಡಿಕ್ಕಲ್ ಅವರ ಈ ವಿಸ್ಫೋಟಕ ಸೆಂಚುರಿ ನೆರವಿನೊಂದಿಗೆ ಕರ್ನಾಟಕ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿದೆ.

ಅಂದಹಾಗೆ ಇದು ಟಿ20 ಕ್ರಿಕೆಟ್ನಲ್ಲಿ ದೇವದತ್ ಪಡಿಕ್ಕಲ್ ಅವರ 4ನೇ ಶತಕ. ಇದಕ್ಕೂ ಮುನ್ನ ಆರಂಭಿಕನಾಗಿ ಎರಡು ಸೆಂಚುರಿಗಳನ್ನು ಸಿಡಿಸಿದ್ದರು. ಆ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಂದು ಶತಕ ಬಾರಿಸಿದ್ದರು. ಇದೀಗ ಮೂರನೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಿ ಮೂರಂಕಿ ರನ್ಗಳಿಸಲು ಯಶಸ್ವಿಯಾಗಿದ್ದಾರೆ.