- Kannada News Photo gallery Cricket photos Vaibhav Suryavanshi Smashed Another Century in T20 Cricket
ಅಬ್ಬರ ಸಿಡಿಲಬ್ಬರ… ವೈಭವ್ ಸೂರ್ಯವಂಶಿ ಶರವೇಗದ ಶತಕ
Vaibhav Suryavanshi Century: ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕ ಭಾರತ ಎ ಪರ 32 ಎಸೆತಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಸೆಂಚುರಿ ಸಿಡಿಸಿದ್ದಾರೆ.
Updated on: Dec 02, 2025 | 1:02 PM

ಟಿ20 ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಇತ್ತೀಚೆಗಷ್ಟೇ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ್ದ ವೈಭವ್ ಇದೀಗ ಮತ್ತೊಂದು ಶತಕ ಬಾರಿಸಿದ್ದಾರೆ. ಈ ಬಾರಿ ಯುವ ದಾಂಡಿಗ ಶತಕ ಮೂಡಿಬಂದಿದ್ದು ದೇಶೀಯ ಅಂಗಳದಲ್ಲಿ ಎಂಬುದು ವಿಶೇಷ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ವೈಭವ್ ಸೂರ್ಯವಂಶಿ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ತಂಡದ ನಾಯಕ ಪೃಥ್ವಿ ಶಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಬಿಹಾರ ಪರ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ ಅರ್ಧಶತಕ ಪೂರೈಸಲು 34 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ ಹಾಫ್ ಸೆಂಚುರಿ ಪೂರ್ಣಗೊಂಡ ಬೆನ್ನಲ್ಲೇ ಯುವ ದಾಂಡಿಗನ ಅಬ್ಬರ ಶುರುವಾಗಿತ್ತು.

ಮಹಾರಾಷ್ಟ್ರ ತಂಡದ ಅನುಭವಿ ಬೌಲರ್ಗಳನ್ನು ಮನಸೋ ಇಚ್ಚೆ ದಂಡಿಸಿದ ವೈಭವ್ ಸೂರ್ಯವಂಶಿ 58 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ಈ ಪಂದ್ಯದಲ್ಲಿ 61 ಎಸೆತಗಳನ್ನು ಎದುರಿಸಿದ ಯುವ ದಾಂಡಿಗ 7 ಭರ್ಜರಿ ಸಿಕ್ಸ್, 7 ಫೋರ್ಗಳೊಂದಿಗೆ ಅಜೇಯ 108 ರನ್ ಬಾರಿಸಿದರು. ವೈಭವ್ ಸೂರ್ಯವಂಶಿ ಬಾರಿಸಿದ ಈ ಶತಕದ ನೆರವಿನೊಂದಿಗೆ ಬಿಹಾರ ತಂಡ 20 ಓವರ್ಗಳಲ್ಲಿ 176 ರನ್ ಕಲೆಹಾಕಿದೆ.

ಇದಕ್ಕೂ ಮುನ್ನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 32 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಯುಎಇ ವಿರುದ್ಧದ ಈ ಪಂದ್ಯದಲ್ಲಿ ಕೇವಲ 42 ಎಸೆತಗಳನ್ನು ಎದುರಿಸಿದ ವೈಭವ್ ಅಂತಿಮವಾಗಿ 15 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 144 ರನ್ ಚಚ್ಚಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ವೈಭವ್ ಬ್ಯಾಟ್ನಿಂದ ಸಿಡಿಲಬ್ಬರದ ಸೆಂಚುರಿ ಮೂಡಿಬಂದಿದೆ.
