
Emerging Teams Asia Cup: ಹಾಂಗ್ಕಾಂಗ್ನಲ್ಲಿ ನಡೆಯುತ್ತಿರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2023 ರ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಭಾರತ ಎ ತಂಡವು ಶುಭಾರಂಭ ಮಾಡಿದೆ. ಈ ಭರ್ಜರಿ ಗೆಲುವಿನ ರೂವಾರಿ ಕನ್ನಡತಿ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಾಂಗ್ಕಾಂಗ್ ತಂಡವು ಕನ್ನಡತಿ ಶ್ರೇಯಾಂಕಾ ಪಾಟೀಲ್ ಸ್ಪಿನ್ ದಾಳಿಗೆ ತತ್ತರಿಸಿತು. ನಾತಾಶ ಮೈಲ್ಸ್ (2) ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಮನ್ನತ್ ಕಶ್ಯಪ್ ಮೊದಲ ಯಶಸ್ಸು ತಂದುಕೊಟ್ಟರು.

ಇದಾದ ಬಳಿಕ ಸ್ಪಿನ್ ಮೋಡಿ ಮಾಡಿದ ಶ್ರೇಯಾಂಕಾ ಪಾಟೀಲ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿದರು. ಪರಿಣಾಮ ಹಾಂಗ್ಕಾಂಗ್ ತಂಡವು 14 ಓವರ್ಗಳಲ್ಲಿ ಕೇವಲ 34 ರನ್ಗಳಿಸಿ ಸರ್ವಪತನ ಕಂಡಿತು.

ಇತ್ತ ಟೀಮ್ ಇಂಡಿಯಾ ಪರ ಸ್ಪಿನ್ ಮೋಡಿ ಮಾಡಿದ್ದ ಶ್ರೇಯಾಂಕಾ ಪಾಟೀಲ್ 3 ಓವರ್ಗಳಲ್ಲಿ ಕೇವಲ 2 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಹಾಗೆಯೇ ಮನ್ನತ್ ಕಶ್ಯಪ್ ಹಾಗೂ ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಪಡೆದರೆ, ಟಿಟಾಸ್ ಸಾಧು 1 ವಿಕೆಟ್ ಪಡೆದರು.

ಇನ್ನು 35 ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಎ ತಂಡದ ವನಿತೆಯರು 5.2 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 38 ರನ್ಗಳಿಸಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.