- Kannada News Photo gallery Cricket photos England wristspinner Rehan Ahmed out of test series for personal reasons
IND vs ENG: ರಾಂಚಿ ಟೆಸ್ಟ್ ನಡುವೆ ಇಂಗ್ಲೆಂಡ್ಗೆ ಬಿಗ್ ಶಾಕ್; ಸ್ಟಾರ್ ಪ್ಲೇಯರ್ ಸರಣಿಯಿಂದ ಔಟ್..!
IND vs ENG: ತಂಡದ ಸ್ಟಾರ್ ಯುವ ಸ್ಪಿನ್ನರ್ ರೆಹಾನ್ ಅಹ್ಮದ್ ಇದೀಗ ಇಡೀ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಟೆಸ್ಟ್ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಡಿರುವ ಲೆಗ್ ಸ್ಪಿನ್ನರ್ ರೆಹಾನ್ ರಾಂಚಿ ಟೆಸ್ಟ್ ನಡುವೆ ಏಕಾಏಕಿ ತಂಡವನ್ನು ತೊರೆದು ತಮ್ಮ ತಾಯ್ನಾಡು ಬ್ರಿಟನ್ಗೆ ಮರಳುತ್ತಿದ್ದಾರೆ.
Updated on: Feb 23, 2024 | 8:52 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಫೆಬ್ರವರಿ 23 ರಿಂದ ಅಂದರೆ ಇಂದಿನಿಂದ ರಾಂಚಿಯಲ್ಲಿ ಆರಂಭವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಕೂಡ ದಿನದಂತ್ಯಕ್ಕೆ 302 ರನ್ ಕಲೆಹಾಕಿ ಉತ್ತಮ ಸ್ಥಿತಿಯಲ್ಲಿದೆ. ಆದರೆ ಈ ನಡುವೆ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.

ತಂಡದ ಸ್ಟಾರ್ ಯುವ ಸ್ಪಿನ್ನರ್ ರೆಹಾನ್ ಅಹ್ಮದ್ ಇದೀಗ ಇಡೀ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಟೆಸ್ಟ್ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಡಿರುವ ಲೆಗ್ ಸ್ಪಿನ್ನರ್ ರೆಹಾನ್ ರಾಂಚಿ ಟೆಸ್ಟ್ಗೂ ಮುನ್ನ ಏಕಾಏಕಿ ತಂಡವನ್ನು ತೊರೆದು ತಮ್ಮ ತಾಯ್ನಾಡು ಬ್ರಿಟನ್ಗೆ ಮರಳುತ್ತಿದ್ದಾರೆ.

ರಾಂಚಿ ಟೆಸ್ಟ್ ಪಂದ್ಯದ ಟಾಸ್ ನಂತರ ರೆಹಾನ್ ಅಹ್ಮದ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಖಚಿತವಾಯಿತು. ವಾಸ್ತವವಾಗಿ ಪಂದ್ಯಕ್ಕೆ ಒಂದು ದಿನ ಮೊದಲು ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಘೋಷಿಸಿತು, ಅದರಲ್ಲಿ ರೆಹಾನ್ ಸ್ಥಾನ ಪಡೆದಿರಲಿಲ್ಲ.

ಆರಂಭದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ರೆಹಾನ್ ಅಹ್ಮದ್ರನ್ನು ಬೇಕಂತಲೆ ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ,ರೆಹಾನ್ ಅಹ್ಮದ್ ಕೌಟುಂಬಿಕ ಕಾರಣಗಳಿಂದ ಈ ಟೆಸ್ಟ್ ಮತ್ತು ಸರಣಿಯಿಂದ ಹೊರಗುಳಿದಿದ್ದು ಬ್ರಿಟನ್ಗೆ ಮರಳುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಸರಣಿಯಲ್ಲಿ ರೆಹಾನ್ ಅಹ್ಮದ್ ಅವರ ಪ್ರದರ್ಶನ ವಿಶೇಷವೇನು ಆಗಿರಲಿಲ್ಲ. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ಈ ಅನನುಭವಿ ಲೆಗ್ ಸ್ಪಿನ್ನರ್ ಆಡಿದ 3 ಪಂದ್ಯಗಳಲ್ಲಿ ಕೇವಲ 11 ವಿಕೆಟ್ಗಳನ್ನು ಪಡೆದರು. ಈ ಪೈಕಿ ವಿಶಾಖಪಟ್ಟಣಂ ಟೆಸ್ಟ್ನಲ್ಲಿ 6 ವಿಕೆಟ್ ಪಡೆದಿದ್ದರು.

ಇಂಗ್ಲೆಂಡ್ ತಂಡ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್, ಶೋಯೆಬ್ ಬಶೀರ್.




