Updated on: Jun 26, 2023 | 10:18 AM
ಪ್ರಸ್ತುತ ಕ್ರಿಕೆಟ್ ಮೈದಾನದಿಂದ ಒಂದು ತಿಂಗಳ ವಿರಾಮ ಪಡೆದಿರುವ ಟೀಂ ಇಂಡಿಯಾ ಆಟಗಾರರು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಭಾರತ ಟೆಸ್ಟ್, ಏಕದಿನ, ಟಿ20 ಸೇರಿದಂತೆ ಎಲ್ಲಾ ಮಾದರಿಯ ಸರಣಿ ಆಡಲಿದೆ.
ಸದ್ಯ ವಿಂಡೀಸ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಟೆಸ್ಟ್ ತಂಡದ ಉಪನಾಯಕರನ್ನಾಗಿ ಅಜಿಂಕ್ಯ ರಹಾನೆಯವರನ್ನು ಹಾಗೂ ಏಕದಿನ ತಂಡದ ಉಪನಾಯಕರನ್ನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸಿದೆ.
ಎಂದಿನಂತೆ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ನೀಡಿದೆ. ಆದರೆ ಈ ಮೊದಲು ಡಬ್ಲ್ಯುಟಿಸಿ ಫೈನಲ್ ಸೋತ ಬಳಿಕ ನಾಯಕ ರೋಹಿತ್ ಸೇರಿದಂತೆ ತಂಡದ ಹಿರಿಯರಿಗೆ ವಿಂಡೀಸ್ ಪ್ರವಾಸದಿಂದ ಕೋಕ್ ನೀಡಲಾಗುವುದು ಎಂಬ ವರದಿ ಹರಿದಾಡಿತ್ತು. ಆದರೆ ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಪೂರ್ಣ ಪ್ರಮಾಣದ ತಂಡವನ್ನು ವಿಂಡೀಸ್ ನಾಡಿಗೆ ಕಳುಹಿಸಲಾಗುತ್ತಿದೆ.
ಏಷ್ಯಾಕಪ್ ಹಾಗೂ ವಿಶ್ವಕಪ್ ತಯಾರಿಗಾಗಿ ವಿಂಡೀಸ್ ಸರಣಿ ಭಾರತಕ್ಕೆ ಬಹಳ ಪ್ರಮುಖವಾಗಿದೆ. ವಿಂಡೀಸ್ ಪ್ರವಾದ ಬಳಿಕ ಭಾರತ ಏಷ್ಯಾಕಪ್ಗೂ ಮುನ್ನ ಯಾವುದೇ ಬಲಿಷ್ಠ ತಂಡದೊಂದಿಗೆ ಸರಣಿ ಆಡುವುದಿಲ್ಲ. ಹಾಗಾಗಿ ಭಾರತ ವಿಂಡೀಸ್ ನಾಡಲ್ಲಿ ಸರಣಿ ಗೆಲ್ಲುವ ಒತ್ತಡದಲ್ಲಿದೆ. ಈ ನಡುವೆ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಪಾಕ್ ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಕೆಲವು ನಾಯಕತ್ವದ ಟಿಪ್ಸ್ ನೀಡಿದ್ದಾರೆ.
ವಿಂಡೀಸ್ ಪ್ರವಾಸದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್, ಭಾರತದ ನಾಯಕ ರೋಹಿತ್ ಶರ್ಮಾ ಅವರು ಇಲ್ಲಿಯವರೆಗೆ ಭಾರತದ ಟೆಸ್ಟ್ ನಾಯಕರಾಗಿ ಸಿಕ್ಕಿರುವ ಅಲ್ಪಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ರೋಹಿತ್ ಮೈದಾನದಲ್ಲಿ ಈ ಹಿಂದೆ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯಂತೆಯೇ ತಮ್ಮ ಉಪಸ್ಥಿತಿಯನ್ನು ತೋರ್ಪಡಿಸಬೇಕು.
ಭಾರತ ಒಂದು ಸಮತೋಲಿತ ತಂಡ. ಆದರೆ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿದೆ. ನಾಯಕತ್ವದಲ್ಲಿ ರೋಹಿತ್ ಶರ್ಮಾ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ವಿರಾಟ್ ಕೊಹ್ಲಿಯಂತೆ ರೋಹಿತ್ ಮೈದಾನದಲ್ಲಿ ತಮ್ಮ ಉಪಸ್ಥಿತಿಯನ್ನು (ಆಕ್ರಮಣಕಾರಿ ನಾಯಕತ್ವ) ತೋರಿಸಬೇಕು. ಆದರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅಕ್ಮಲ್ ಹೇಳಿಕೊಂಡಿದ್ದಾರೆ.
ಇನ್ನು ವಿಂಡೀಸ್ ತಂಡಕ್ಕೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವಲ್ಲಿ ಆಯ್ಕೆ ಮಂಡಳಿ ಒಳ್ಳೇಯ ನಿರ್ಧಾರ ತೆಗೆದುಕೊಂಡಿದೆ ಎಂದಿರುವ ಅಕ್ಮಲ್, ಸರ್ಫರಾಜ್ ಖಾನ್ ಮತ್ತು ಉಮ್ರಾನ್ ಮಲಿಕ್ (ಟೆಸ್ಟ್) ಅವರನ್ನು ತಂಡದಿಂದ ಹೊರಗಿಟ್ಟಿದ್ದನ್ನು ಪ್ರಶ್ನಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಒಬ್ಬ ಅಥವಾ ಇಬ್ಬರು ಆಟಗಾರರ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತದೆ. ದಾಖಲೆಗಳನ್ನು ನೋಡಿದ ನಂತರ ನನ್ನ ನೆನಪಿಗೆ ಬರುವ ಒಬ್ಬ ಆಟಗಾರನೆಂದರೆ ಸರ್ಫರಾಜ್ ಖಾನ್. ಅವರನ್ನು ವಿಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಆದರೆ ಅವರಿಗೆ ತಂಡದಲ್ಲಿ ಅವಕಾಶ ನೀಡಬೇಕಿತ್ತು ಎಂದಿದ್ದಾರೆ.
Published On - 10:15 am, Mon, 26 June 23