- Kannada News Photo gallery Cricket photos World Cup Qualifier West Indies fined 60 per cent of their match fee for slow over rate
World Cup Qualifier: ಜಿಂಬಾಬ್ವೆ ವಿರುದ್ಧ ಸೋತ ವೆಸ್ಟ್ ಇಂಡೀಸ್ಗೆ ಮತ್ತೊಂದು ಶಾಕ್ ನೀಡಿದ ಐಸಿಸಿ..!
World Cup Qualifier: ಲೀಗ್ ಹಂತದ ಮೂರನೇ ಪಂದ್ಯದಲ್ಲಿ ನಿಧಾನಗತಿಯ ಓವರ್ಗಾಗಿ ವಿಂಡೀಸ್ ತಂಡ ಪಂದ್ಯದ ಶುಲ್ಕ ಶೇ. 60 ರಷ್ಟನ್ನು ದಂಡವಾಗಿ ಪಾವತಿಸಬೇಕಾಗಿದೆ.
Updated on: Jun 26, 2023 | 8:36 AM

ಪ್ರಸ್ತುತ ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಈಗಾಗಲೇ ಈ ಸುತ್ತಿನಲ್ಲಿ ಲೀಗ್ ಹಂತ ಮುಗಿಯುವದರಲ್ಲಿದ್ದು, ಇನ್ನೇನೂ ಸೂಪರ್ ಸಿಕ್ಸ್ ಹಂತ ಪ್ರಾರಂಭವಾಗಬೇಕಿದೆ. ಇದರಲ್ಲಿ ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಹೀನಾಯ ಸೋಲುಂಡಿತ್ತು.

ಇದೀಗ ಜಿಂಬಾಬ್ವೆ ವಿರುದ್ಧ ಮುಗ್ಗರಿಸಿದ್ದ ಕೆರಿಬಿಯನ್ ತಂಡಕ್ಕೆ ಐಸಿಸಿ ದಂಡದ ಬರೆ ಎಳೆದಿದೆ. ಲೀಗ್ ಹಂತದ ಮೂರನೇ ಪಂದ್ಯದಲ್ಲಿ ನಿಧಾನಗತಿಯ ಓವರ್ಗಾಗಿ ವಿಂಡೀಸ್ ತಂಡ ಪಂದ್ಯದ ಶುಲ್ಕ ಶೇ. 60 ರಷ್ಟನ್ನು ದಂಡವಾಗಿ ಪಾವತಿಸಬೇಕಾಗಿದೆ.

ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದ್ದು, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ನಿಧಾನಗತಿಯ ಪ್ರತಿ ಓವರ್‌ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡವನ್ನಾಗಿ ವಿಧಿಸಲಾಗುತ್ತದೆ. ಈ ನಿಯಮದ ಪ್ರಕಾರ ವೆಸ್ಟ್ ಇಂಡೀಸ್ ತಂಡ ನಿಗದಿತ ಸಮತಕ್ಕಿಂತ ಮೂರು ಓವರ್ ಕಡಿಮೆ ಮಾಡಿದೆ. ಹೀಗಾಗಿ ವಿಂಡೀಸ್ ತಂಡಕ್ಕೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಇದಲ್ಲದೆ, ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದರಿಂದ ನಿಯಮ ಉಲ್ಲಂಘನೆಯ ಬಗ್ಗೆ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

ಇನ್ನು ವಿಶ್ವಕಪ್ನಲ್ಲಿ ವಿಂಡೀಸ್ ಪ್ರದರ್ಶನಕ್ಕೆ ಬರುವುದಾದರೆ, ಲೀಗ್ನಲ್ಲಿ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತ ನಂತರವೂ ವೆಸ್ಟ್ ಇಂಡೀಸ್ ಕ್ವಾಲಿಫೈಯರ್ ಸುತ್ತಿನ ಮುಂದಿನ ಹಂತಕ್ಕೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಸೂಪರ್ ಸಿಕ್ಸ್ ಹಂತಕ್ಕೆ ಎಂಟ್ರಿಕೊಟ್ಟಿರುವ ಗುಂಪಿನ 3 ತಂಡಗಳಲ್ಲಿ ವಿಂಡೀಸ್ ಕೂಡ ಸೇರಿದೆ.

ಸದ್ಯ ವಿಂಡೀಸ್ ತಂಡ ವಿಶ್ವಕಪ್ ಕ್ವಾಲಿಫೈಯರ್ನ ಲೀಗ್ ಹಂತದಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿದ್ದು, ಇದರಲ್ಲಿ 2 ಗೆಲುವು ಮತ್ತು 1 ಸೋಲು ಕಂಡಿದೆ. ಇನ್ನು ಲೀಗ್ ಸುತ್ತಿನಲ್ಲಿ ಉಳಿಸಿರುವ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ.




