Updated on: Jun 26, 2023 | 9:25 AM
ಜೂನ್ 18 ರಿಂದ ಆರಂಭವಾಗಿರುವ ವಿಶ್ವಕಪ್ ಅರ್ಹತಾ ಸುತ್ತಿನ ಲೀಗ್ ಹಂತ ಇನ್ನೇರಡು ದಿನಗಳಲ್ಲಿ ಮುಗಿಯಲಿದೆ. ಕ್ವಾಲಿಫೈಯರ್ ಸುತ್ತಿನಲ್ಲಿ 10 ತಂಡಗಳು ಕಣಕ್ಕಿಳಿದಿದ್ದು, ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಈ ಬಾರಿಯ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲ್ಲಿವೆ.
ಅದಕ್ಕೂ ಮುನ್ನ ಸದ್ಯಕ್ಕೆ ಕ್ವಾಲಿಫೈಯರ್ ಸುತ್ತಿನಲ್ಲಿ ಲೀಗ್ ಹಂತ ಮುಕ್ತಾಯದ ಸನಿಹದಲ್ಲಿದ್ದು, ಇದೀಗ ಮುಂದಿನ ಹಂತ ಅಂದರೆ, ಸೂಪರ್ ಸಿಕ್ಸ್ ಹಂತಕ್ಕೆ 10 ತಂಡಗಳ ಪೈಕಿ ಯಾವ 6 ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ ಎಂಬುದು ಖಚಿತವಾಗಿದೆ.
ಕ್ವಾಲಿಫೈಯರ್ ಸುತ್ತಿನ ಲೀಗ್ ಹಂತವು ಮಂಗಳವಾರದವರೆಗೆ ಮುಂದುವರಿಯಲಿದ್ದು, ನಂತರ ಸೂಪರ್ ಸಿಕ್ಸ್ ಮತ್ತು ಪ್ಲೇಆಫ್ ಸೆಮಿಫೈನಲ್ ಪಂದ್ಯದ ಹಂತವು ಗುರುವಾರದಿಂದ ಆರಂಭವಾಗಲಿದೆ. ಅಲ್ಲಿ ಆರು ತಂಡಗಳು ವಿಶ್ವಕಪ್ ಆಡಲು ಸ್ಪರ್ಧಿಸಲಿವೆ. ಇಲ್ಲಿಂದ ಸ್ಥಾನ ಗಿಟ್ಟಿಸಿಕೊಂಡ ತಂಡ ವಿಶ್ವಕಪ್ ಆಡಲು ಭಾರತಕ್ಕೆ ಬರಲಿದೆ.
ಇದರಲ್ಲಿ ಎಲ್ಲರ ಕಣ್ಣು ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಮೇಲೆ ನೆಟ್ಟಿದೆ. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಎರಡೂ ತಂಡಗಳು ಅರ್ಹತಾ ಪಂದ್ಯಗಳನ್ನು ಆಡುವ ಮೂಲಕ ವಿಶ್ವಕಪ್ ತಲುಪುವ ಸ್ಥಿತಿಯಲ್ಲಿವೆ. ಸದ್ಯ ಲೀಗ್ ಸುತ್ತಿನಲ್ಲಿ 10 ತಂಡಗಳ ಪೈಕಿ 4 ತಂಡಗಳ ಪಯಣ ಅಂತ್ಯಗೊಂಡಿದೆ. ಅದೇನೆಂದರೆ, 2023ರ ವಿಶ್ವಕಪ್ ಆಡುವ ಈ ನಾಲ್ಕು ತಂಡಗಳ ಕನಸು ನನಸಾಗಿಯೇ ಉಳಿದು ಈಗ ತವರಿಗೆ ಮರಳಬೇಕಾಗಿದೆ.
ಅಂದರೆ ವಿಶ್ವಕಪ್ ಆಡಲು ಅರ್ಹತಾ ಹಂತದಲ್ಲಿ ಆಡುತ್ತಿರುವ 10 ತಂಡಗಳ ಪೈಕಿ 4 ತಂಡಗಳಾದ ನೇಪಾಳ. ಯುಎಇ, ಯುಎಸ್ಎ ಮತ್ತು ಐರ್ಲೆಂಡ್ ತಂಡಗಳು ಈ ಬಾರಿಯ ವಿಶ್ವಕಪ್ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಇನ್ನುಳಿದ 6 ತಂಡಗಳಾದ ನೆದರ್ಲ್ಯಾಂಡ್ಸ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಓಮನ್ ಜೊತೆಗೆ ಅರ್ಹತಾ ಪಂದ್ಯದ ಆತಿಥೇಯ ಜಿಂಬಾಬ್ವೆ ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಎಂಟ್ರಿಕೊಟ್ಟಿವೆ. ಈ ಆರು ತಂಡಗಳು ಈಗ ಅಂತಿಮ ಎರಡು ತಂಡಗಳಾಗಿ ವಿಶ್ವಕಪ್ ತಲುಪಲು ಪರಸ್ಪರ ಪೈಪೋಟಿ ನಡೆಸಲಿವೆ.
ಆದಾಗ್ಯೂ, ಲೀಗ್ ಹಂತದಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಅವು ಮುಗಿದ ನಂತರ, ಸೂಪರ್ ಸಿಕ್ಸ್‌ನಲ್ಲಿ ಯಾವ ತಂಡವು ಯಾರನ್ನು ಎದುರಿಸಲಿದೆ ಎಂಬುದನ್ನು ಪಾಯಿಂಟ್ ಟೇಬಲ್ ನಿರ್ಧರಿಸುತ್ತದೆ.
10 ತಂಡಗಳಲ್ಲಿ 2 ತಂಡಗಳು ಮಾತ್ರ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಅಂದರೆ ಕ್ವಾಲಿಫೈಯರ್ ಸುತ್ತಿನ ಮೂಲಕ ಕೇವಲ 2 ತಂಡಗಳು ಮಾತ್ರ ವಿಶ್ವಕಪ್‌ಗೆ ಎಂಟ್ರಿಕೊಡಲಿವೆ. ಕ್ವಾಲಿಫೈಯರ್ ಪಂದ್ಯದ ಹಂತದಲ್ಲಿ ಅಂತಿಮ 2 ತಂಡಗಳನ್ನು ನಿರ್ಧರಿಸಲು ಈಗ ಸೂಪರ್ ಸಿಕ್ಸ್ ಸುತ್ತನ್ನು ಆಡಲಾಗುತ್ತದೆ. ನಂತರ ಈ ಎರಡೂ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಆ ಬಳಿಕ ಅಂತಿಮ 2 ತಂಡಗಳ ಚಿತ್ರಣ ಸ್ಪಷ್ಟವಾಗಲಿದೆ.