IPL 2025: ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 8ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ ಬರೋಬ್ಬರಿ 196 ರನ್ ಕಲೆಹಾಕಿತು.
197 ರನ್ಗಳ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 146 ರನ್ಗಳಿಸಿ ಸಿಎಸ್ಕೆ ತಂಡವು ತವರು ಮೈದಾನದಲ್ಲಿ 50 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿಯ ಫೋಟೋವೊಂದು ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ವರ್ಷ ಬ್ಯಾನ್ ಆಗಿದ್ದೀರಿ ಎಂದು ಕೊಹ್ಲಿ ಗೇಲಿ ಮಾಡಿದ್ದಾರೆ ಎಂಬ ಕ್ಯಾಪ್ಷನ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹರಿಬಿಡಲಾಗಿದೆ.
ಅತ್ತ ಈ ಫೋಟೋದಲ್ಲಿ ಕಿಂಗ್ ಕೊಹ್ಲಿಯ ಮುಖಭಾವವು ಕೂಡ ಹಾಗೆಯೇ ಇದೆ. ಆದರೆ ಇದು ಕೊಹ್ಲಿಯು ಸಿಎಸ್ಕೆ ತಂಡವನ್ನು ಗೇಲಿ ಮಾಡಿದ್ದಲ್ಲ. ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ದಾಖಲಿಸಿದೆ ಎಂದು ವಿಕ್ಟರಿ ಸಿಂಬಲ್ ತೋರಿಸಿರುವುದು.
ಇದನ್ನೇ ಕೆಲವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಿರಾಟ್ ಕೊಹ್ಲಿ 2 ವರ್ಷ ಬ್ಯಾನ್ ಆಗಿದ್ದೀರಿ ಎಂದು ಟ್ರೋಲ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ವೈರಲ್ ಆಗಿದ್ದು, 2016 ಮತ್ತು 2017 ರಲ್ಲಿ ಸಿಎಸ್ಕೆ ತಂಡ ಬ್ಯಾನ್ ಆಗಿದ್ದ ವಿಷಯವು ಮತ್ತೊಮ್ಮೆ ಚರ್ಚೆಗೀಡಾಗಿದೆ.