ಪಾಕಿಸ್ತಾನ್ ವಿರುದ್ಧ ಫಿನ್ ಅಲೆನ್ ಸಿಡಿಲಬ್ಬರದ ಮುಂದುವರೆದಿದೆ. ಅದು ಕೂಡ ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ಸಿಕ್ಸರ್ಗಳ ಸುರಿಮಳೆಯೊಂದಿಗೆ ಎಂಬುದು ವಿಶೇಷ. ಈ ಮೈದಾನದಲ್ಲಿ ಪಾಕಿಸ್ತಾನ್ ವಿರುದ್ಧ ಸ್ಪೋಟಕ ಇನಿಂಗ್ಸ್ ಪ್ರದರ್ಶಿಸಿರುವ ಅಲೆನ್ ಈವರೆಗೆ 21 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಜನವರಿ 17, 2024 ರಂದು ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಲೆನ್ ಕೇವಲ 62 ಎಸೆತಗಳಲ್ಲಿ 137 ರನ್ ಸಿಡಿಸಿದ್ದರು. ಈ ವೇಳೆ ಫಿನ್ ಅಲೆನ್ ಬ್ಯಾಟ್ನಿಂದ ಮೂಡಿಬಂದ ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 16. ಇನ್ನು 5 ಫೋರ್ಗಳನ್ನು ಸಹ ಬಾರಿಸಿದ್ದರು.
ಇದೀಗ ಇದೇ ಮೈದಾನದಲ್ಲಿ ಮತ್ತೊಮ್ಮೆ ಫಿನ್ ಅಲೆನ್ ಪಾಕಿಸ್ತಾನ್ ಬೌಲರ್ಗಳ ಬೆಂಡೆತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ 2ನೇ ಮ್ಯಾಚ್ನಲ್ಲಿ 16 ಎಸೆತಗಳನ್ನು ಎದುರಿಸಿದ ಅಲೆನ್ 38 ರನ್ ಬಾರಿಸಿದ್ದಾರೆ. ಈ ವೇಳೆ ಒಟ್ಟು 5 ಸಿಕ್ಸ್ ಹಾಗೂ 1 ಫೋರ್ ಬಾರಿಸಿದ್ದಾರೆ.
‘ವಿಶೇಷ ಎಂದರೆ ಪಾಕಿಸ್ತಾನ್ ವಿರುದ್ಧದ ಈ ಎರಡು ಪಂದ್ಯಗಳಲ್ಲಿ ಫಿನ್ ಅಲೆನ್ ಎದುರಿಸಿದ್ದು ಕೇವಲ 78 ಎಸೆತಗಳನ್ನು ಮಾತ್ರ. ಈ ವೇಳೆ 175 ರನ್ ಸಿಡಿಸಿದ್ದಾರೆ. ಇದರಲ್ಲಿ ಬರೋಬ್ಬರಿ 21 ಸಿಕ್ಸರ್ಗಳು ಒಳಗೊಂಡಿವೆ. ಈ ಮೂಲಕ ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಅಲೆನ್ ಏಕಪಕ್ಷೀಯ ಪ್ರಾಬಲ್ಯ ಮುಂದುವರೆಸಿದ್ದಾರೆ.
ಅಂದಹಾಗೆ ಇದೇ ಫಿನ್ ಅಲೆನ್ ಈ ಹಿಂದೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. 2021 ರಲ್ಲಿ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು ಎಂಬುದೇ ವಿಶೇಷ. ಈ ಮೂರು ವರ್ಷಗಳಲ್ಲಿ ಆರ್ಸಿಬಿ ಒಟ್ಟು 45 ಪಂದ್ಯಗಳನ್ನಾಡಿದೆ. ಈ ವೇಳೆ ಒಮ್ಮೆಯೂ ಅಲೆನ್ ಅವರನ್ನು ಕಣಕ್ಕಿಳಿಸಿರಲಿಲ್ಲ ಎಂಬುದೇ ಅಚ್ಚರಿ.