ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿ ಕಾಂಗರೂ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಮೊದಲ ದಿನದಾಟವನ್ನು ರದ್ದುಗೊಳಿಸಬೇಕಾಯಿತು.
ಇದೀಗ ಉಳಿದ ನಾಲ್ಕು ದಿನಗಳಲ್ಲಿಯೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ಟೀಂ ಇಂಡಿಯಾಕ್ಕೆ ಸಂಕಷ್ಟ ತಂದೊಡಿದೆ. ಏಕೆಂದರೆ ರೋಹಿತ ಪಡೆ ಡಬ್ಲ್ಯುಟಿಸಿ ಫೈನಲ್ಗೇರಬೇಕೆಂದರೆ ಆಸ್ಟ್ರೇಲಿಯಾ ವಿರುದ್ಧ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಹೀಗಾಗಿ ಗಾಬಾ ಟೆಸ್ಟ್ ನಡೆಯುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಮಳೆಯಿಂದ ಡ್ರಾಗೊಂಡರೆ, ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ಇದು ಡಬ್ಲ್ಯುಟಿಸಿ ಫೈನಲ್ ತಲುಪುವ ಭಾರತದ ಸಾಧ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಂಡವು ಕಾಂಗರೂ ತಂಡದ ವಿರುದ್ಧ ಮುಂದಿನ ಎರಡು ಟೆಸ್ಟ್‌ಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗಿದೆ.
ಒಂದು ವೇಳೆ ಗಾಬಾ ಟೆಸ್ಟ್ ಡ್ರಾ ಆದರೆ, ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 58.89 ಆದರೆ, ಭಾರತದ ಗೆಲುವಿನ ಶೇಕಡಾವಾರು 55.88 ಆಗುತ್ತದೆ. ಹೀಗಾಗಿ ಭಾರತ 3ನೇ ಸ್ಥಾನದಲ್ಲೇ ಉಳಿಯಲಿದ್ದು, ಆಸ್ಟ್ರೇಲಿಯ 2ನೇ ಸ್ಥಾನದಲ್ಲೇ ಮುಂದುವರೆಯಲಿದೆ. ದಕ್ಷಿಣ ಆಫ್ರಿಕಾ ಎಂದಿನಂತೆ ಮೊದಲ ಸ್ಥಾನದಲ್ಲೇ ಮುಂದುವರೆಯಲಿದೆ.
ಒಂದು ವೇಳೆ ಗಾಬಾ ಟೆಸ್ಟ್ನಲ್ಲಿ ಫಲಿತಾಂಶ ಹೊರಬಿದ್ದು, ಟೀಂ ಇಂಡಿಯಾ ಪಂದ್ಯವನ್ನು ಗೆದ್ದರೆ, ಆಗ ಡಬ್ಲ್ಯುಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಲಿದೆ. ಇದರ ಜೊತೆಗೆ ಸೋತ ಆಸ್ಟ್ರೇಲಿಯಾ 56.67 ರ ಗೆಲುವಿನ ಶೇಕಡಾವಾರುವಿನೊಂದಿಗೆ ಮೂರನೇ ಸ್ಥಾನಕ್ಕೆ ಜಾರಲಿದೆ.
ಇದಕ್ಕೆ ತದ್ವಿರುದ್ದವಾಗಿ ಗಾಬಾದಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಅದು ಎರಡನೇ ಸ್ಥಾನದಲ್ಲೇ ಮುಂದುವರೆಯಲಿದೆ. ಆದರೆ ಅದರ ಗೆಲುವಿನ ಶೇಕಡಾವಾರು ದಕ್ಷಿಣ ಆಫ್ರಿಕಾದ ಅಗ್ರ ಸ್ಥಾನಕ್ಕೆ ಸಮಾನವಾಗಿರುತ್ತದೆ. ಆದಾಗ್ಯೂ ಭಾರತದ ವಿರುದ್ಧ ಕಾಂಗರೂ ಪಡೆ ಸೋತರೆ ಅದು ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.