- Kannada News Photo gallery Cricket photos Tim Southee's Final Test: Record-Breaking Innings Against England
ENG vs NZ: ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಗೇಲ್ ದಾಖಲೆ ಸರಿಗಟ್ಟಿದ ಟಿಮ್ ಸೌಥಿ
Tim Southee's Final Test: ನ್ಯೂಜಿಲೆಂಡ್‌ನ ಸ್ಟಾರ್ ವೇಗಿ ಟಿಮ್ ಸೌಥಿ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ದಿಗ್ಗಜರ ದಾಖಲೆ ಮುರಿದಿದ್ದಾರೆ.ಮೊದಲು ಜಾಕ್ವೆಸ್ ಕಾಲಿಸ್ ಅವರ ದಾಖಲೆ ಮುರಿದ ಸೌಥಿ,ಇದರ ಜೊತೆಗೆ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದರು.
Updated on: Dec 14, 2024 | 5:03 PM

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿರುವ ಇಂಗ್ಲೆಂಡ್ ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇತ್ತ ಸರಣಿ ಸೋತಿರುವ ನ್ಯೂಜಿಲೆಂಡ್ ಕೊನೆಯ ಟೆಸ್ಟ್ ಗೆದ್ದು ತಂಡದ ಸ್ಟಾರ್ ವೇಗಿಗೆ ಗೆಲುವಿನ ವಿದಾಯ ಹೇಳಲು ಬಯಸಿದೆ.

ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಟಿಮ್ ಸೌಥಿ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಇದು ನನ್ನ ಕೊನೆಯ ಟೆಸ್ಟ್ ಸರಣಿ ಎಂದಿದ್ದರು. ಅಂದರೆ ಆಂಗ್ಲರ ವಿರುದ್ಧದ ಕೊನೆಯ ಟೆಸ್ಟ್ ಟಿಮ್ ಸೌಥಿ ಅವರ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಹೀಗಾಗಿ ಸೌಥಿಗೆ ಈ ಪಂದ್ಯದ ಬಹಳ ವಿಶೇಷವಾಗಿದೆ.

ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟಿಮ್ ಸೌಥಿ ತಮ್ಮ ಕೊನೆಯ ಪಂದ್ಯದಲ್ಲಿ ವಿಂಡೀಸ್ನ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್ರೌಂಡರ್ ಜಾಕ್ವೆಸ್ ಕಾಲಿಸ್ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 10 ಎಸೆತಗಳನ್ನು ಎದುರಿಸಿದ ಸೌಥಿ 230 ಸ್ಟ್ರೈಕ್ ರೇಟ್‌ನಲ್ಲಿ 23 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಂತಕಥೆ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿದಲ್ಲದೆ, ಗೇಲ್ ಅವರನ್ನು ಸಹ ಸರಿಗಟ್ಟಿದರು.

ಟಿಮ್ ಸೌಥಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 98 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಮೂಲಕ ಟೆಸ್ಟ್‌ನಲ್ಲಿ 97 ಸಿಕ್ಸರ್‌ಗಳನ್ನು ಸಿಡಿಸಿದ್ದ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. ಇದರ ಜೊತೆಗೆ 98 ಸಿಕ್ಸರ್‌ಗಳನ್ನು ಬಾರಿಸಿರುವ ಕ್ರಿಸ್ ಗೇಲ್ ಅವರನ್ನು ಸಹ ಸರಿಗಟ್ಟಿದ್ದಾರೆ.

ಟಿಮ್ ಸೌಥಿಗೆ ಇನ್ನೂ ಒಂದು ಇನ್ನಿಂಗ್ಸ್ ಆಡುವ ಅವಕಾಶವಿದ್ದು, ಅವರು ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆದರೆ, ಟೆಸ್ಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಬಹುದು. ಇದರೊಂದಿಗೆ ಅವರು ಟೆಸ್ಟ್‌ನಲ್ಲಿ ಸಿಕ್ಸರ್ಗಳ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಇದುವರೆಗೆ ಕೇವಲ 3 ಬ್ಯಾಟ್ಸ್‌ಮನ್‌ಗಳು ಮಾತ್ರ ಟೆಸ್ಟ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 133 ಸಿಕ್ಸರ್‌ಗಳನ್ನು ಬಾರಿಸಿರುವ ಆಂಗ್ಲ ನಾಯಕ ಬೆನ್ ಸ್ಟೋಕ್ಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ವೀರೇಂದ್ರ ಸೆಹ್ವಾಗ್ ಭಾರತದ ಪರ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳನ್ನು ಹೊಡೆದಿದ್ದು, ಅವರ ಹೆಸರಿನಲ್ಲಿ 91 ಸಿಕ್ಸರ್‌ಗಳಿವೆ.

ಈ ಪಂದ್ಯದ ಮೊದಲ ದಿನದಂತ್ಯಕ್ಕೆ ನ್ಯೂಜಿಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿದೆ. ನಾಯಕ ಟಾಮ್ ಲ್ಯಾಥಮ್ ಗರಿಷ್ಠ 63 ರನ್ ಗಳಿಸಿದರೆ, ಮಿಚೆಲ್ ಸ್ಯಾಂಟ್ನರ್ 50 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಉಳಿದಂತೆ ತಂಡದ ಪರ ವಿಲ್ ಯಂಗ್ 42 ರನ್ ಮತ್ತು ಕೇನ್ ವಿಲಿಯಮ್ಸನ್ 44 ರನ್ ಗಳಿಸಿದರು. ಇತ್ತ ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ ಮತ್ತು ಗಸ್ ಅಟ್ಕಿನ್ಸನ್ ತಲಾ ಮೂರು ವಿಕೆಟ್ ಪಡೆದರೆ, ಬ್ರೇಡನ್ ಕಾರ್ಸೆ ಎರಡು ವಿಕೆಟ್ ಪಡೆದರು.
























