- Kannada News Photo gallery Cricket photos Virat Kohli Breaks Sachin Tendulkar's Most Catches in Test Cricket
ಶಾರ್ಪ್ ಕ್ಯಾಚ್ ಹಿಡಿದು ದಾಖಲೆ ಬರೆದ ವಿರಾಟ್ ಕೊಹ್ಲಿ
Australia vs India, 3rd Test: ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ತಂಡವು 42 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 100 ರನ್ ಕಲೆಹಾಕಿದೆ. ಇತ್ತ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Updated on:Dec 15, 2024 | 7:53 AM

ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಕ್ಯಾಚ್ಗಳೊಂದಿಗೆ ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದ 19ನೇ ಓವರ್ನ 3ನೇ ಎಸೆತದಲ್ಲಿ ನಾಥನ್ ಮೆಕ್ಸ್ವೀನಿ ಸ್ಲಿಪ್ನಲ್ಲಿ ನೀಡಿದ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಅತ್ಯಂತ ಸುಲಭವಾಗಿ ಹಿಡಿದರು. ಇನ್ನು 34ನೇ ಓವರ್ನ 2ನೇ ಎಸೆತದಲ್ಲಿ ಮಾರ್ನಸ್ ಲಾಬುಶೇನ್ ಕ್ಯಾಚ್ ನೀಡಿದ್ದರು. ಸೆಕೆಂಡ್ ಸ್ಲಿಪ್ನತ್ತ ತೂರಿ ಬಂದ ಚೆಂಡನ್ನು ಕ್ಷಣಾರ್ಧದಲ್ಲಿ ಅದ್ಭುತವಾಗಿ ಹಿಡಿಯುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾದರು.

ಈ ಎರಡು ಕ್ಯಾಚ್ಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಭಾರತೀಯ ಫೀಲ್ಡರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ 3ನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದರು.

1989 ರಿಂದ 2013ರ ನಡುವೆ 200 ಟೆಸ್ಟ್ ಪಂದ್ಯಗಳನ್ನಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 366 ಇನಿಂಗ್ಸ್ಗಳಿಂದ ಒಟ್ಟು 115 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಮೂರನೇ ಭಾರತೀಯ ಫೀಲ್ಡರ್ ಎನಿಸಿಕೊಂಡಿದ್ದರು.

ಇದೀಗ ಆಸ್ಟ್ರೇಲಿಯಾ ವಿರುದ್ಧದ 2 ಕ್ಯಾಚ್ಗಳೊಂದಿಗೆ ವಿರಾಟ್ ಕೊಹ್ಲಿ ತಮ್ಮ ಕ್ಯಾಚ್ಗಳ ಸಂಖ್ಯೆಯನ್ನು 117* ಕ್ಕೇರಿಸಿದ್ದಾರೆ. ಈವರೆಗೆ 231 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಕೊಹ್ಲಿ ಇದೀಗ ಟೆಸ್ಟ್ನಲ್ಲಿ ಅತೀ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಭಾರತದ ಮೂರನೇ ಫೀಲ್ಡರ್ ಹಿರಿಮೆಗೆ ಪಾತ್ರರಾಗಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ರಾಹುಲ್ ದ್ರಾವಿಡ್. 1996 ರಿಂದ 2012 ನಡುವೆ 299 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ದ್ರಾವಿಡ್ ಒಟ್ಟು 209 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ ಭಾರತದ ಅತ್ಯಂತ ಯಶಸ್ವಿ ಫೀಲ್ಡರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ವಿವಿಎಸ್ ಲಕ್ಷ್ಮಣ್. 1996 ರಿಂದ 2012 ರ ನಡುವೆ 248 ಇನಿಂಗ್ಸ್ ಆಡಿರುವ ಲಕ್ಷ್ಮಣ್ ಒಟ್ಟು 135 ಕ್ಯಾಚ್ಗಳನ್ನು ಹಿಡಿದ್ದಾರೆ. ಇದೀಗ 117 ಕ್ಕೇರಿರುವ ವಿರಾಟ್ ಕೊಹ್ಲಿ ಇನ್ನು 18 ಕ್ಯಾಚ್ಗಳನ್ನು ಹಿಡಿದರೆ ಲಕ್ಷ್ಮಣ್ ಅವರ ದಾಖಲೆಯನ್ನು ಮುರಿಯಬಹುದು.
Published On - 7:53 am, Sun, 15 December 24
























