- Kannada News Photo gallery Cricket photos Glenn Maxwell now has scored the third-most ducks for Australia in T20Is
ಡಕ್ಮ್ಯಾನ್ ದಾಖಲೆ ಪಟ್ಟಿಯಲ್ಲಿ ಮೇಲೇರಿದ ಗ್ಲೆನ್ ಮ್ಯಾಕ್ಸ್ವೆಲ್
Glenn Maxwell Records: ಟಿ20 ಕ್ರಿಕೆಟ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕವೇ ಗಮನ ಸೆಳೆಯುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಇದೀಗ ಕಳಪೆ ಫಾರ್ಮ್ನಲ್ಲಿದ್ದಾರೆ. ಈ ಕಳಪೆ ಫಾರ್ಮ್ನೊಂದಿಗೆ ಮ್ಯಾಕ್ಸಿ ಟಿ20 ಕ್ರಿಕೆಟ್ನಲ್ಲಿ ಬೇಡದ ದಾಖಲೆಯೊಂದಕ್ಕೆ ಕೊರೊಳೊಡ್ಡಿದ್ದಾರೆ. ಈ ದಾಖಲೆಯೊಂದಿಗೆ ಆಸ್ಟ್ರೇಲಿಯಾದ ಮೂರನೇ ಡಕ್ಮ್ಯಾನ್ ಎನಿಸಿಕೊಂಡಿದ್ದಾರೆ.
Updated on:Jul 31, 2025 | 9:33 AM

ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅನಗತ್ಯ ದಾಖಲೆ ಪಟ್ಟಿಯೊಂದರಲ್ಲಿ ಮೇಲೇರಿದ್ದಾರೆ. ಅದು ಸಹ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ. ಸೇಂಟ್ ಕಿಟ್ಸ್ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಎಸೆತದಲ್ಲಿ ಔಟಾಗಿದ್ದರು.

ಹೀಗೆ ಶೂನ್ಯಕ್ಕೆ ಔಟಾಗುವುದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ಬಾರಿ ಡಕ್ ಔಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮೂರನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ಪರ 111 ಟಿ20 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಈವರೆಗೆ 5 ಬಾರಿ ಸೊನ್ನೆಗೆ ಔಟಾಗಿದ್ದಾರೆ. ಈ ಮೂಲಕ ಬೇಡದ ದಾಖಲೆ ಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೇರಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಸೊನ್ನೆಗೆ ಔಟಾದ ಬ್ಯಾಟರ್ ದಾಖಲೆ ಮಾಜಿ ನಾಯಕ ಆರೋನ್ ಫಿಂಚ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ಪರ 103 ಟಿ20 ಇನಿಂಗ್ಸ್ ಆಡಿರುವ ಫಿಂಚ್ 8 ಬಾರಿ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಡಕ್ ಮ್ಯಾನ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಡೇವಿಡ್ ವಾರ್ನರ್. ಆಸ್ಟ್ರೇಲಿಯಾ ಪರ 110 ಟಿ20 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ವಾರ್ನರ್ 6 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ 5 ಸೊನ್ನೆಗಳೊಂದಿಗೆ ಗ್ಲೆನ್ ಮ್ಯಾಕ್ಸ್ವೆಲ್ ದ್ವಿತೀಯ ಸ್ಥಾನಕ್ಕೇರಿದ್ದು, ಇನ್ನೆರಡು ಬಾರಿ ಸೊನ್ನೆ ಸುತ್ತಿದರೆ ವಾರ್ನರ್ ಅವರನ್ನು ಹಿಂದಿಕ್ಕಲಿದ್ದಾರೆ.

ಅಂದಹಾಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಸೊನ್ನೆಗೆ ಔಟಾದ ದಾಖಲೆ ಬಾಂಗ್ಲಾದೇಶ್ ತಂಡದ ಸೌಮ್ಯ ಸರ್ಕಾರ, ಐರ್ಲೆಂಡ್ನ ಪಾಲ್ ಸ್ಟೀರ್ಲಿಂಗ್ ಹಾಗೂ ಶ್ರೀಲಂಕಾದ ದಸುನ್ ಶನಕ ಹೆಸರಿನಲ್ಲಿದೆ. ಈ ಮೂವರು ಬ್ಯಾಟರ್ಗಳು 13 ಬಾರಿ ಡಕ್ ಔಟ್ ಆಗುವ ಮೂಲಕ ಅನಗತ್ಯ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
Published On - 9:30 am, Thu, 31 July 25
