6505 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ವೆಲ್
Australia vs Pakistan: ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಪಂದ್ಯದ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on: Nov 17, 2024 | 9:25 AM

ಪಾಕಿಸ್ತಾನ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ 64 ರನ್ ಕಲೆಹಾಕುವ ಮೂಲಕ ಆಸ್ಟ್ರೇಲಿಯಾದ ಸ್ಪೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ದಾಖಲೆ ಬರೆದಿದ್ದಾರೆ. ಅದು ಕೂಡ ಕೀರನ್ ಪೊಲಾರ್ಡ್ ಅವರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಪಾಕ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಕ್ರಮವಾಗಿ 43 ಹಾಗೂ 21 ರನ್ ಕಲೆಹಾಕಿದ್ದಾರೆ. ಈ ರನ್ಗಳೊಂದಿಗೆ ಮ್ಯಾಕ್ಸಿ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕಡಿಮೆ ಎಸೆತಗಳಲ್ಲಿ 10000 ರನ್ ಪೂರೈಸಿದ ವಿಶ್ವ ದಾಖಲೆ ಮ್ಯಾಕ್ಸ್ವೆಲ್ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಹೆಸರಿನಲ್ಲಿತ್ತು. ಪೊಲಾರ್ಡ್ 6640 ಎಸೆತಗಳಲ್ಲಿ 10 ಸಾವಿರ ರನ್ ಪೂರೈಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮ್ಯಾಕ್ಸ್ವೆಲ್ ಮುರಿದಿದ್ದಾರೆ.

ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 6505 ಎಸೆತಗಳಲ್ಲಿ 10 ಸಾವಿರ ರನ್ ಕಲೆಹಾಕಿದ್ದು, ಈ ಮೂಲಕ ಟಿ20 ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ ಹತ್ತು ಸಾವಿರ ರನ್ಗಳ ಮೈಲುಗಲ್ಲು ದಾಟಿದ ವಿಶ್ವ ದಾಖಲೆಯನ್ನು ಮ್ಯಾಕ್ಸ್ವೆಲ್ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 16ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 14562 ರನ್ ಕಲೆಹಾಕಿರುವ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 10031 ರನ್ಗಳೊಂದಿಗೆ ಮ್ಯಾಕ್ಸ್ವೆಲ್ ಹದಿನಾರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.




