ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಗಂಡು ಮಗುವಿಗೆ ತಂದೆಯಾಗಿರುವ ಪಾಂಡ್ಯ ಮದುಮಗನಾಗುತ್ತಿದ್ದಾರೆ ಎಂಬ ವಿಚಾರ ನಿಮ್ಮಲ್ಲಿ ಅಚ್ಚರಿ ಉಂಟು ಮಾಡುತ್ತಿರಬಹುದು. ಆದರೆ ಅಚ್ಚರಿ ಎನಿಸಿದರು ಮೂಲಗಳ ಪ್ರಕಾರ ಈ ಸುದ್ದಿ ಸತ್ಯ.
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಜೊತೆ ಒಟ್ಟಿಗೆ ಜೀವನ ನಡೆಸಲು ಆರಂಭಿಸಿ ಈಗಾಗಲೇ ವರ್ಷಗಳೇ ಕಳೆದಿವೆ. ಇದೀಗ ಈ ಜೋಡಿ ಫೆಬ್ರವರಿ 14 ಅನ್ನು ವಿಶೇಷವಾಗಿಸಲು ಮರುಮದುವೆಯಾಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ
ಸುದ್ದಿ ಪ್ರಕಾರ, ಈ ಮದುವೆಯು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಅದರ ಸಿದ್ಧತೆಗಳು ಕಳೆದ ನವೆಂಬರ್‌ನಲ್ಲಿಯೇ ಪ್ರಾರಂಭವಾಗಿವೆ ಎಂದು ತಿಳಿದುಬಂದಿದೆ.
ಈ ಮದುವೆ ಎರಡು ರೀತಿಯಲ್ಲಿ ನಡೆಯುತ್ತಿದ್ದು, ಮೊದಲು ಈ ಇಬ್ಬರು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಬಳಿಕ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಕಾರ ಮದುವೆಯಾಗಲಿದ್ದಾರೆ. ಏಕೆಂದರೆ ಪಾಂಡ್ಯ ಗೆಳತಿ, ನತಾಶಾ ಸರ್ಬಿಯಾದವರಾಗಿದ್ದು, ಅಲ್ಲಿನ ಸಂಪ್ರದಾಯದ ಪ್ರಕಾರವೂ ಮದುವೆ ನಡೆಯಲಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ಇಬ್ಬರ ವಿವಾಹ ಸಂಭ್ರಮವೂ ಫೆಬ್ರವರಿ 13 ಸೋಮವಾರದಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 16 ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.
ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಜನವರಿ 1, 2020 ರಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದರು. ಬಳಿಕ ಇಬ್ಬರು ಒಟ್ಟಿಗೆ ಜೀವನ ನಡೆಸಲು ಆರಂಭಿಸಿದ ಈ ಜೋಡಿಗೆ ಅಗಸ್ತ್ಯ ಎಂಬ ಮಗ ಕೂಡ ಇದ್ದಾನೆ.
Published On - 5:53 pm, Sun, 12 February 23