T20 ವಿಶ್ವಕಪ್ 2021 ರಲ್ಲಿ ಅತ್ಯಂತ ಕಳಪೆ ಪ್ರದರ್ಶನದ ನೀಡಿದ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ದೀರ್ಘಾವಧಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಬೆನ್ನುನೋವಿನಿಂದ ಬಳಲುತ್ತಿದ್ದು, ಹೀಗಾಗಿ ಟೆಸ್ಟ್ ಮಾದರಿಯಿಂದ ನಿವೃತ್ತಿಯಾಗುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್‌ಸೈಡ್ ಸ್ಪೋರ್ಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, 'ಹಾರ್ದಿಕ್ ಪಾಂಡ್ಯ ಅವರು ತಮ್ಮ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಟೆಸ್ಟ್‌ನಿಂದ ನಿವೃತ್ತಿ ಹೊಂದಲು ಬಯಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಅವರು ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಂಡಳಿಗೆ ತಿಳಿಸಿಲ್ಲ. ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಪಾಂಡ್ಯ ಕಂಬ್ಯಾಕ್ ಮಾಡುವ ಯೋಜನೆಯಲ್ಲಿದ್ದಾರೆ. ಆದರೆ ಗಾಯದ ಕಾರಣ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಿಂದ ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್ ಬಗ್ಗೆ ಗಮನಹರಿಸಲು ಪಾಂಡ್ಯ ಚಿಂತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಾರ್ದಿಕ್ ಪಾಂಡ್ಯ 2019 ರಿಂದ ಬೆನ್ನು ನೋವನಿಂದ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದರೂ ಸಂಪೂರ್ಣ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಬೌಲಿಂಗ್ ಮಾಡುವುದನ್ನು ಪಾಂಡ್ಯ ನಿಲ್ಲಿಸಿದ್ದರು. ಇದೀಗ ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ ಆಗಿ ಸ್ಥಾನ ಪಡೆಯಬೇಕಿದ್ದರೆ ಬೌಲಿಂಗ್ ಮಾಡಲೇಬೇಕಾಗಿದೆ. ಈಗಾಗಲೇ ಶಾರ್ದೂಲ್ ಠಾಕೂರ್ ಹಾಗೂ ವೆಂಕಟೇಶ್ ಅಯ್ಯರ್ ಆಲ್ರೌಂಡರ್ಗಳಾಗಿ ತಂಡದಲ್ಲಿದ್ದಾರೆ. ಹೀಗಾಗಿ ಈ ಇಬ್ಬರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಪಾಂಡ್ಯಗೆ ಅವಕಾಶ ಸಿಗಲಿದೆ.
ಆದರೆ ಹಾರ್ದಿಕ್ ಪಾಂಡ್ಯ ಅವರ ಅತೀ ದೊಡ್ಡ ಸಮಸ್ಯೆ ಬೌಲಿಂಗ್. ಕಳೆದ ಒಂದು ವರ್ಷದಲ್ಲಿ ಪಾಂಡ್ಯ ಒಟ್ಟು 46 ಓವರ್‌ಗಳನ್ನು ಮಾತ್ರ ಮಾಡಿದ್ದಾರೆ. ಇದೇ ಕಾರಣದಿಂದ ಇದೀಗ ತಂಡದಿಂದ ಕೂಡ ಕೈ ಬಿಡಲಾಗಿದೆ. ಅಷ್ಟೇ ಅಲ್ಲದೆ ದೇಶೀಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಬಿಸಿಸಿಐ ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಪ್ರಸ್ತುತ ತಮ್ಮ ಫಿಟ್ನೆಸ್ ಬಗ್ಗೆ ಗಮನಹರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ವಿಜಯ್ ಹಜಾರೆ ಟ್ರೋಫಿಯಿಂದ ಕೂಡ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ. ಏಕೆಂದರೆ ಇನ್ನೆರಡು ವರ್ಷಗಳಲ್ಲಿ ಟಿ20 ಮತ್ತು ಏಕದಿನ ವಿಶ್ವಕಪ್ ಬರಲಿದ್ದು, ಆ ವೇಳೆ ಸಂಪೂರ್ಣ ಫಿಟ್ನೆಸ್ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ ಹಾರ್ದಿಕ್ ಪಾಂಡ್ಯ.