- Kannada News Photo gallery Cricket photos Harmanpreet, Richa Ghosh, Radha Yadav big gain in Latest ICC Women's T20I Rankings
ICC T20 rankings: ಟಾಪ್ 10ರೊಳಗೆ ಮೂವರು ಭಾರತೀಯರು; ಶಫಾಲಿ, ಹರ್ಮನ್, ರಿಚಾ ಘೋಷ್ಗೆ ಮುಂಬಡ್ತಿ
ICC T20 rankings: ಮಹಿಳಾ ಏಷ್ಯಾಕಪ್ ನಡುವೆ ಐಸಿಸಿ, ಮಹಿಳಾ ಟಿ20 ಆಟಗಾರ್ತಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನೂತನ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರ್ತಿಯರು ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಇದರಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜಂಟಿಯಾಗಿ 11ನೇ ಸ್ಥಾನಕ್ಕೆ ತಲುಪಿದ್ದಾರೆ.
Updated on: Jul 23, 2024 | 4:50 PM

ಪ್ರಸ್ತುತ, ಭಾರತ ವನಿತಾ ಪಡೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ತಂಡ ಇದುವರೆಗೆ ಆಡಿರುವ ಎರಡು ಪಂದ್ಯಗಳ ಪೈಕಿ ಎರಡನ್ನೂ ಗೆದ್ದುಕೊಂಡಿದೆ. ಇಂದು ತಂಡ ತನ್ನ ಮೂರನೇ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯವನ್ನು ಗೆದ್ದರೆ ಹರ್ಮನ್ ಪಡೆಗೆ ಸೆಮಿಫೈನಲ್ ಹಾದಿ ಇನ್ನಷ್ಟು ಸುಗಮವಾಗಲಿದೆ.

ಈ ನಡುವೆ ಐಸಿಸಿ, ಮಹಿಳಾ ಟಿ20 ಆಟಗಾರ್ತಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನೂತನ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರ್ತಿಯರು ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಇದರಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜಂಟಿಯಾಗಿ 11ನೇ ಸ್ಥಾನಕ್ಕೆ ತಲುಪಿದ್ದಾರೆ.

ನಾಯಕಿ ಹರ್ಮನ್‌ಪ್ರೀತ್ ಕೌರ್ ಇದುವರೆಗೆ ಏಷ್ಯಾಕಪ್‌ನಲ್ಲಿ ನಡೆದಿರುವ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಐದು ರನ್ ಬಾರಿಸಿದ್ದ, ಹರ್ಮನ್ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ 66 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.

ಇವರ ಜೊತೆಗೆ ಜಂಟಿಯಾಗಿ 11ನೇ ಸ್ಥಾನದಲ್ಲಿರುವ ಆರಂಭಿ ಆಟಗಾರ್ತಿ ಶಫಾಲಿ ವರ್ಮಾ, 4 ಸ್ಥಾನಗಳ ಮುಂಬಡ್ತಿ ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ 40 ರನ್ ಬಾರಿಸಿದ್ದ ಶಫಾಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ 37 ರನ್ ಕಲೆಹಾಕಿದ್ದರು.

ಈ ಇಬ್ಬರೊಂದಿಗೆ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ಕೂಡ 4 ಸ್ಥಾನ ಮೇಲೇರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಯುಎಇ ವಿರುದ್ಧ 29 ಎಸೆತಗಳಲ್ಲಿ 64 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ರಿಚಾ ಘೋಷ್, 28ನೇ ಸ್ಥಾನದಿಂದ 24ನೇ ಸ್ಥಾನಕ್ಕೆ ಬಂದು ಕುಳಿತಿದ್ದಾರೆ.

ಉಳಿದಂತೆ ಪಾಕಿಸ್ತಾನದ ವಿರುದ್ಧ ಅದ್ಭುತ 45 ರನ್‌ಗಳ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಮಂಧಾನ ಕೂಡ ಐದನೇ ಸ್ಥಾನದಲ್ಲಿ ಉಳಿದಿದ್ದು, ನಾಲ್ಕನೇ ಸ್ಥಾನದಲ್ಲಿರುವ ಲಾರಾ ವೊಲ್ವಾರ್ಡ್‌ಗಿಂತ ಕೇವಲ ಐದು ಪಾಯಿಂಟ್‌ಗಳಷ್ಟು ಹಿಂದುಳಿದಿದ್ದಾರೆ. ಇದೀಗ ಅವರು ಏಷ್ಯಾಕಪ್‌ನ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಶ್ರೇಯಾಂಕದಲ್ಲಿ ಮೇಲೇರುವ ಅವಕಾಶ ಹೊಂದಿದ್ದಾರೆ.

ಇನ್ನು ಬೌಲರ್ಗಳ ಶ್ರೇಯಾಂಕದ ಬಗ್ಗೆ ಹೇಳುವುದಾದರೆ.. ಭಾರತದ ವೇಗದ ಬೌಲರ್ ರೇಣುಕಾ ಸಿಂಗ್ ಟಾಪ್ 10 ರೊಳಗೆ ಎಂಟ್ರಿಯಾಗಿದ್ದು, 10ನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಅಂದರೆ ಒಂದು ಸ್ಥಾನ ಜಿಗಿತ ಕಂಡಿದ್ದಾರೆ. ರೇಣುಕಾ ಟೂರ್ನಿಯಲ್ಲಿ ಇದುವರೆಗೆ 3 ವಿಕೆಟ್ ಪಡೆದಿದ್ದು, ಅವರು ಪಾಕಿಸ್ತಾನದ ವಿರುದ್ಧ 14 ರನ್‌ಗಳಿಗೆ ಎರಡು ವಿಕೆಟ್ ಪಡೆದಿದ್ದರು.

ದೀಪ್ತಿ ಶರ್ಮಾ ಟಿ20ಯಲ್ಲಿ ಆಲ್‌ರೌಂಡರ್ ಮತ್ತು ಬೌಲಿಂಗ್ ಶ್ರೇಯಾಂಕದಲ್ಲಿ ಎಂದಿನಂತೆ ತಮ್ಮ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
























