
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇಬ್ಬರು ಯುವ ಆಟಗಾರರು ಚೊಚ್ಚಲ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನಾಡುವ ಅವಕಾಶ ಪಡೆದಿದ್ದರು. ಅವರಲ್ಲಿ ಒಬ್ಬರು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಮತ್ತೊಬ್ಬರು ವೇಗಿ ಹರ್ಷಿತ್ ರಾಣಾ. ಮೊದಲ ಪಂದ್ಯದಲ್ಲಿ ಕಮಾಲ್ ಮಾಡುವಲ್ಲಿ ಜೈಸ್ವಾಲ್ ಫೇಲ್ ಆದರೆ, ರಾಣಾ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ಪರ ಕಣಕ್ಕಿಳಿದು ಅಮೋಘ ಪ್ರದರ್ಶನ ನೀಡಿದ್ದ ಹರ್ಷಿತ್ ರಾಣಾಗೆ ಭಾಗ್ಯದ ಬಾಗಿಲು ತೆರೆದಂತ್ತಾಗಿದೆ. ಏಕೆಂದರೆ ಕೇವಲ 3 ತಿಂಗಳ ಅಂತರದಲ್ಲಿ ರಾಣಾ ಟೀಂ ಇಂಡಿಯಾ ಪರ ಮೂರು ಮಾದರಿಯ ಕ್ರಿಕೆಟ್ನಲ್ಲೂ ಅಂತರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಪಡೆದಿದ್ದಾರೆ.

ಇದಲ್ಲದೆ ಮೂರು ಮಾದರಿಯ ಕ್ರಿಕೆಟ್ನಲ್ಲೂ ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡುವಲ್ಲು ರಾಣಾ ಸಫಲರಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಇದುವರೆಗೆ ಯಾವ ವೇಗಿಯೂ ನಿರ್ಮಿಸಲಾಗದ ದಾಖಲೆಯನ್ನು ರಾಣ ಸೃಷ್ಟಿಸಿದ್ದಾರೆ.

ವಾಸ್ತವವಾಗಿ ವೇಗಿ ಹರ್ಷಿತ್ ರಾಣಾ ಭಾರತ ಪರ ಮೂರು ಸ್ವರೂಪಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂರು ಮಾದರಿಯಲ್ಲೂ ಅವರು ತಮ್ಮ ಮೊದಲ ಪಂದ್ಯದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದ್ದಾರೆ.

ಹರ್ಷಿತ್ ರಾಣಾ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿದ್ದರು. ಆ ಬಳಿಕ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದರು. ಇದೀಗ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೂ 3 ವಿಕೆಟ್ ಪಡೆದಿದ್ದಾರೆ. ಆದಾಗ್ಯೂ ರಾಣಾ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೂ ಒಂದು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.

ವಾಸ್ತವವಾಗಿ ಹರ್ಷಿತ್ ರಾಣಾ ಇಂಗ್ಲೆಂಡ್ ವಿರುದ್ಧ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ 11 ರನ್‌ಗಳನ್ನು ಬಿಟ್ಟುಕೊಟ್ಟರು. ಇದಾದ ನಂತರ ಎರಡನೇ ಓವರ್‌ನಲ್ಲಿ ಒಂದೇ ಒಂದು ರನ್ ನೀಡಿದರು. ಆದರೆ ಮೂರನೇ ಓವರ್‌ನಲ್ಲಿ ರಾಣಾ ಭಾರಿ ದುಬಾರಿ ಎನಿಸಿಕೊಂಡರು. ಹರ್ಷಿತ್ ರಾಣಾ ಬೌಲ್ ಮಾಡಿದ ಈ ಓವರ್‌ನಲ್ಲಿ ಫಿಲ್ ಸಾಲ್ಟ್ ಬೌಂಡರಿಗಳ ಮಳೆಗರೆದರು.

ಹರ್ಷಿತ್ ರಾಣಾ ಬೌಲ್ ಮಾಡಿದ ಈ ಓವರ್‌ನಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಪಿಲ್ ಸಾಲ್ಟ್ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳ ಸಹಿತ ಒಟ್ಟು 26 ರನ್ ಕಲೆಹಾಕಿದರು. ಇದರೊಂದಿಗೆ ರಾಣಾ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್ ಎನಿಸಿಕೊಂಡರು.