- Kannada News Photo gallery Cricket photos Steve Smith Goes Past Virat Kohli In Most Away Test centuries
ಸ್ಟೀವ್ ಸ್ಮಿತ್ ಭರ್ಜರಿ ಸೆಂಚುರಿಗೆ ಮುದುಡಿದ ವಿರಾಟ್ ಕೊಹ್ಲಿ ದಾಖಲೆ
Steve Smith Test Century Record: ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ 36ನೇ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸ್ಮಿತ್ ಮುರಿದಿದ್ದಾರೆ. ಈ ದಾಖಲೆಯೊಂದಿಗೆ ಆಸ್ಟ್ರೇಲಿಯಾ ಪರ ವಿದೇಶದಲ್ಲಿ ಅತೀ ಹೆಚ್ಚು ಟೆಸ್ಟ್ ಸೆಂಚುರಿ ಸಿಡಿಸಿದ ಸರದಾರ ಎಂಬ ಹೆಗ್ಗಳಿಕೆಗೂ ಸ್ಮಿತ್ ಪಾತ್ರರಾಗಿದ್ದಾರೆ.
Updated on: Feb 08, 2025 | 8:00 AM

ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 2ನೇ ದಿನದಾಟದ ಅಂತ್ಯದ ವೇಳೆಗೆ 239 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 120 ರನ್ ಬಾರಿಸಿದರು.

ಈ ಅಜೇಯ ಶತಕದೊಂದಿಗೆ ಟೆಸ್ಟ್ ಸೆಂಚುರಿ ಸರದಾರರ ಪಟ್ಟಿಯಲ್ಲಿ ಸ್ಮಿತ್ 5ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದು ಆಸ್ಟ್ರೇಲಿಯಾ ದಾಂಡಿಗ ಮುನ್ನುಗ್ಗಿದ್ದಾರೆ. ಅದು ಕೂಡ ವಿದೇಶದಲ್ಲಿ ಅತ್ಯಧಿಕ ಟೆಸ್ಟ್ ಸೆಂಚುರಿಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ವಿದೇಶದದಲ್ಲಿ ಅತೀ ಹೆಚ್ಚು ಟೆಸ್ಟ್ ಸೆಂಚುರಿ ಬಾರಿಸಿದ ಸಕ್ರಿಯ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು. 2011 ರಿಂದ 2025ರವರೆಗೆ ವಿದೇಶಿ ಟೆಸ್ಟ್ ಪಂದ್ಯವಾಡಿರುವ ವಿರಾಟ್ ಕೊಹ್ಲಿ ಒಟ್ಟು 16 ಶತಕಗಳನ್ನು ಬಾರಿಸಿದ್ದಾರೆ.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಸ್ವೀವ್ ಸ್ಮಿತ್ ಯಶಸ್ವಿಯಾಗಿದ್ದಾರೆ. ಶ್ರೀಲಂಕಾದಲ್ಲಿ ಶತಕ ಸಿಡಿಸುವುದರೊಂದಿಗೆ ಸ್ಮಿತ್ ವಿದೇಶದಲ್ಲಿ 17 ಸೆಂಚುರಿ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ವಿದೇಶದಲ್ಲಿ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ಆಸ್ಟ್ರೇಲಿಯಾ ದಾಂಡಿಗನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಪಾಂಟಿಂಗ್ 16 ವಿದೇಶಿ ಟೆಸ್ಟ್ ಶತಕಗಳೊಂದಿಗೆ ಈ ದಾಖಲೆ ಬರೆದಿದ್ದರು. ಇದೀಗ ಈ ಸರ್ವಶ್ರೇಷ್ಠ ರೆಕಾರ್ಡ್ ಮುರಿದು ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗೆಯೇ ವಿದೇಶದಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ವಿಶ್ವದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. 1989 ರಿಂದ 2012 ರ ನಡುವೆ ಟೆಸ್ಟ್ನಲ್ಲಿ ಸಚಿನ್ ತೆಂಡೂಲ್ಕರ್ ಒಟ್ಟು 51 ಶತಕಗಳನ್ನು ಬಾರಿಸಿದ್ದರು. ಈ 51 ಶತಕಗಳಲ್ಲಿ 29 ಸೆಂಚುರಿಗಳು ಮೂಡಿಬಂದಿರುವುದು ವಿದೇಶದಲ್ಲಿ ಎಂಬುದು ವಿಶೇಷ. ಈ ಮೂಲಕ ವಿದೇಶದಲ್ಲಿ ಅತೀ ಹೆಚ್ಚು ಟೆಸ್ಟ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದಾರೆ.



















