- Kannada News Photo gallery Cricket photos High Court Orders BCCI To Pay 538 Crore rs To Kochi Tuskers Kerala
ಬರೋಬ್ಬರಿ 13 ವರ್ಷಗಳ ಬಳಿಕ IPL ತಂಡಕ್ಕೆ 538 ಕೋಟಿ ರೂ. ಪರಿಹಾರ..!
Kochi Tuskers Kerala: IPL 2011 ರಲ್ಲಿ ಕಣಕ್ಕಿಳಿದಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಟಸ್ಕರ್ಸ್ ಪಡೆ ಗೆದ್ದಿರುವುದು ಕೇವಲ 6 ಪಂದ್ಯಗಳನ್ನು ಮಾತ್ರ. ಇನ್ನು 8 ಮ್ಯಾಚ್ಗಳಲ್ಲಿ ಸೋತಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಅಂಕ ಪಟ್ಟಿಯಲ್ಲಿ 8ನೇ ಸ್ಥಾನ ಅಲಂಕರಿಸುವ ಮೂಲಕ ಟೂರ್ನಿಯನ್ನು ಅಂತ್ಯಗೊಳಿಸಿತ್ತು.
Updated on: Jun 19, 2025 | 8:08 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2011 ರಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿದಿದ್ದವು. ಈಗಿರುವ 8 ತಂಡಗಳ ಜೊತೆ ಅಂದು ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ಪುಣೆ ವಾರಿಯರ್ಸ್ ಇಂಡಿಯಾ ತಂಡಗಳು ಕಾಣಿಸಿಕೊಂಡಿದ್ದವು. ಆದರೆ 2012 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಐಪಿಎಲ್ನಿಂದ ಕೈ ಬಿಡಲಾಯಿತು.

ಹೀಗೆ ಒಂದೇ ಸೀಸನ್ ಬಳಿಕ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯನ್ನು ರದ್ದುಗೊಳಿಸಲು ಮುಖ್ಯ ಕಾರಣ ಐಪಿಎಲ್ ಫ್ರಾಂಚೈಸಿ ನಿಯಮವನ್ನು ಉಲ್ಲಂಘಿಸಿರುವುದು. ಅಂದರೆ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯು ಮೊದಲ ಸೀಸನ್ನಲ್ಲೇ ಫ್ರ್ಯಾಂಚೈಸ್ ಶುಲ್ಕದ ಭಾಗವಾಗಿರುವ ಶೇಕಡಾ 10 ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಲು ವಿಫಲವಾಗಿತ್ತು.

ಹೀಗಾಗಿ ರೊಂಡಾ ಸ್ಪೋರ್ಟ್ಸ್ ವರ್ಲ್ಡ್ (RSW) - ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (KCPL) ಒಡೆತನದಲ್ಲಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯನ್ನು ಐಪಿಎಲ್ನಿಂದ ಕೈ ಬಿಡಲಾಯಿತು. ಭಾರತೀಯ ಕ್ರಿಕೆಟ್ ಮಂಡಳಿಯ ಈ ನಿರ್ಧಾರದ ವಿರುದ್ಧ ಕೊಚ್ಚಿ ಫ್ರಾಂಚೈಸಿ 2012 ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ 2015 ರಲ್ಲಿ ಮಧ್ಯಸ್ಥಿಕೆ ನ್ಯಾಯಮಂಡಳಿಯು ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಮಾಲೀಕರ ಪರ ತೀರ್ಪು ನೀಡಿದ್ದರು.

ಈ ತೀರ್ಪಿನಂತೆ ಬಿಸಿಸಿಐ, ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಮಾಲೀಕರಿಗೆ 384.8 ಕೋಟಿ ರೂ. ಮತ್ತು 153.3 ಕೋಟಿ ರೂ.ಗಳಿಗೂ ಬಡ್ಡಿ ವೆಚ್ಚದೊಂದಿಗೆ ಪರಿಹಾರ ಮೊತ್ತವನ್ನು ಪಾವತಿಸಲು ಆದೇಶಿಸಿತು. ಆದರೆ ಈ ತೀರ್ಪಿನ ವಿರುದ್ಧ ಬಿಸಿಸಿಐ ಬಾಂಬೆ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಇದೀಗ ಬಾಂಬೆ ಹೈಕೋರ್ಟ್ ಕೂಡ ಬಿಸಿಸಿಐ ವಿರುದ್ಧ ತೀರ್ಪು ನೀಡಿದೆ.

ಮಂಗಳವಾರ ಪ್ರಕಟಿಸಿದ ಆದೇಶದಲ್ಲಿ, ನ್ಯಾಯಾಧೀಶ ಆರ್. ಚಾಗ್ಲಾ, ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿರುವ ಯಾವುದೇ 'ಸ್ಪಷ್ಟ ಅಕ್ರಮ' ಮಧ್ಯಸ್ಥಿಕೆದಾರರ ತೀರ್ಪುನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಮಾಲೀಕರಿಗೆ 538 ಕೋಟಿ ರೂ. ಪರಿಹಾರ ಮೊತ್ತವನ್ನು ಪಾವತಿಸಲು ನ್ಯಾಯಾಲಯ ಬಿಸಿಸಿಐಗೆ ಸೂಚಿಸಿದೆ.

ಅದರಂತೆ ಇದೀಗ 14 ವರ್ಷಗಳ ಬಳಿಕ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಮತ್ತೆ ಸುದ್ದಿಯಲ್ಲಿದೆ. ಅದು ಕೂಡ ಬಿಸಿಸಿಐ ಕಡೆಯಿಂದ ಬರೋಬ್ಬರಿ 538 ಕೋಟಿ ರೂ. ಪರಿಹಾರ ಪಡೆಯುವ ಸಲುವಾಗಿ ಎಂಬುದು ವಿಶೇಷ. ಇನ್ನು ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಭಾರತೀಯ ಕ್ರಿಕೆಟ್ ಮಂಡಳಿ ಸುಪ್ರೀಮ್ ಕೋರ್ಟ್ ಮೊರೆ ಹೋಗಲಿದ್ದಾರಾ ಕಾದು ನೋಡಬೇಕಿದೆ.




