
ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ ಟೂರ್ನಿಯು (Asia Cup 2025) ಭರದಿಂದ ಸಾಗುತ್ತಿದೆ. ಈ ಟೂರ್ನಿಯ ಮೊದಲ ಸುತ್ತು ಪೂರ್ಣಗೊಂಡಿದ್ದು, ಈ ಸುತ್ತಿನ ಮೂಲಕ 4 ತಂಡಗಳು ಮುಂದಿನ ರೌಂಡ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಇದೀಗ ಸೂಪರ್-4 ಹಂತದ ಪಂದ್ಯಗಳು ಜರುಗುತ್ತಿದೆ.

ಸೂಪರ್-4 ಹಂತದಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ತಂಡಗಳು ಕಣಕ್ಕಿಳಿಯುತ್ತಿವೆ. ಈ ಸುತ್ತು ಕೂಡ ರೌಂಡ್ ರಾಬಿನ್ ಮಾದರಿಯಲ್ಲೇ ನಡೆಯಲಿದೆ. ಅಂದರೆ ಇಲ್ಲಿ ಪ್ರತಿ ತಂಡಗಳು ತಲಾ ಮೂರು ಪಂದ್ಯಗಳನ್ನಾಡಲಿದೆ. ಅದರಂತೆ ಟೀಮ್ ಇಂಡಿಯಾ ಪಾಕಿಸ್ತಾನ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ತಂಡಗಳನ್ನು ಎದುರಿಸಲಿದೆ.

ಈ ಮೂರು ಪಂದ್ಯಗಳಲ್ಲಿ ಭಾರತ ತಂಡವು ಗೆಲುವು ದಾಖಲಿಸಿದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಫೈನಲ್ಗೇರಲಿದೆ. ಅಂದರೆ ಈ ಬಾರಿಯ ಏಷ್ಯಾಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಯಾವುದೇ ಸೆಮಿಫೈನಲ್ ಇರುವುದಿಲ್ಲ. ಬದಲಾಗಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ.

ಅದರಂತೆ ಟೀಮ್ ಇಂಡಿಯಾ ಮೂರು ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ ಫೈನಲ್ ಆಡುವುದು ಖಚಿತವಾಗಲಿದೆ. ಇನ್ನು ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಪಡೆದರೂ ಫೈನಲ್ಗೆ ಅರ್ಹತೆ ಪಡೆಯಬಹುದು. ಆದರೆ ಉಳಿದ ಮೂರು ತಂಡಗಳು ಕೂಡ ಎರಡೆರಡು ಪಂದ್ಯಗಳನ್ನು ಗೆದ್ದರೆ ನೆಟ್ ರನ್ ರೇಟ್ ಗಣನೆಗೆ ಬರಲಿದೆ.

ಹೀಗಾಗಿ ಭಾರತ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಬೇಕಿದ್ದರೆ ಪಾಕಿಸ್ತಾನ್ (ಸೆಪ್ಟೆಂಬರ್ 21), ಬಾಂಗ್ಲಾದೇಶ್ (ಸೆಪ್ಟೆಂಬರ್ 24) ಹಾಗೂ ಶ್ರೀಲಂಕಾ (ಸೆಪ್ಟೆಂಬರ್ 26) ವಿರುದ್ಧ ಗೆಲುವು ದಾಖಲಿಸಬೇಕು. ಈ ಮೂಲಕ ಟೀಮ್ ಇಂಡಿಯಾ ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಡೈರೆಕ್ಟ್ ಎಂಟ್ರಿ ಪಡೆಯಬಹುದು.