
ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಈ ಬಾರಿ ಸೆಂಚುರಿ ಮೂಡಿಬಂದಿರುವುದು 37ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಅಂದರೆ ನಿವೃತ್ತಿ ಅಂಚಿನಲ್ಲಿದ್ದರೂ ಕಿಂಗ್ ಕೊಹ್ಲಿಯ ರನ್ ದಾಹ ಬತ್ತಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.

ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 135 ರನ್ ಬಾರಿಸಿದರು. ಇದು ಕಿಂಗ್ ಕೊಹ್ಲಿಯ 83ನೇ ಅಂತಾರಾಷ್ಟ್ರೀಯ ಸೆಂಚುರಿ ಎಂಬುದು ವಿಶೇಷ. ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಶತಕ ಬಾರಿಸಿದಾಗ ಭಾರತ ಎಷ್ಟು ಪಂದ್ಯ ಗೆದ್ದಿದೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಪ್ರಶ್ನೆಗೆ ಉತ್ತರ ಬರೋಬ್ಬರಿ 59 ಮ್ಯಾಚ್ಗಳು. ವಿರಾಟ್ ಕೊಹ್ಲಿ ಶತಕ ಬಾರಿಸಿದ 83 ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ 59 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದು ಕೂಡ ವಿಶ್ವ ದಾಖಲೆ ಎಂಬುದು ವಿಶೇಷ. ಅಂದರೆ ಕೊಹ್ಲಿ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಗೆಲುವು ಬಹುತೇಕ ಖಚಿತ.

ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ರಿಕಿ ಪಾಂಟಿಂಗ್. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 71 ಶತಕ ಸಿಡಿಸಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ 55 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ.

ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದಾರೆ. ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬರೋಬ್ಬರಿ 100 ಸೆಂಚುರಿ ಸಿಡಿಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 53 ಮ್ಯಾಚ್ಗಳನ್ನು ಮಾತ್ರ.