
ICC Awards 2022: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2022ರ ಟೆಸ್ಟ್ ಕ್ರಿಕೆಟಿಗರ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಬಾರಿ ಅಂತಿಮ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದರು. ಆದರೆ ಇದರಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಸ್ಥಾನ ಪಡೆದಿರಲಿಲ್ಲ ಎಂಬುದೇ ಅಚ್ಚರಿ.

ಅದರಂತೆ ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ, ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್ಸ್ಟೋವ್ ಹಾಗೂ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಕಾಣಿಸಿಕೊಂಡಿದ್ದರು.

ಈ ಪಟ್ಟಿಯಲ್ಲಿದ್ದ ಮೂವರನ್ನು ಹಿಂದಿಕ್ಕಿರುವ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಐಸಿಸಿ 2022ರ ಅತ್ಯುತ್ತಮ ಟೆಸ್ಟ್ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಸಿಸಿ ಕಾರ್ಯಕ್ರಮದಲ್ಲಿ 2022 ರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ಟೋಕ್ಸ್ ಪಡೆಯಲಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ 2022ರಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದರು. ಈ ವೇಳೆ 870 ರನ್ ಮತ್ತು 26 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು 9 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹೀಗಾಗಿಯೇ ಕಳೆದ ವರ್ಷದ ಟೆಸ್ಟ್ ಕ್ರಿಕೆಟಿಗನ ಪ್ರಶಸ್ತಿ ಬೆನ್ ಸ್ಟೋಕ್ಸ್ಗೆ ಒಲಿದಿದೆ.

ಇನ್ನು 2022ರ ಏಕದಿನ ಕ್ರಿಕೆಟಿಗನ ಪ್ರಶಸ್ತಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಪಾಲಾಗಿದೆ. ಕಳೆದ ವರ್ಷ 9 ಏಕದಿನ ಪಂದ್ಯಗಳನ್ನು ಆಡಿದ್ದ ಬಾಬರ್ 3 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿ ಒಟ್ಟು 679 ರನ್ ಕಲೆಹಾಕಿದ್ದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಬಾಬರ್ ಆಜಂ ಗೆ ಐಸಿಸಿ ಏಕದಿನ ಕ್ರಿಕೆಟಿಗನ ಪ್ರಶಸ್ತಿ ಒಲಿದಿದೆ.