ICC Rankings: ಮತ್ತೆ ಅಗ್ರಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ; ಶತಕ ವೀರ ತಿಲಕ್ಗೆ ಟಾಪ್ 3ನೇ ಸ್ಥಾನ
ICC Rankings: ಐಸಿಸಿ ತನ್ನ ಇತ್ತೀಚಿನ ಟಿ20 ಆಲ್‌ರೌಂಡರ್ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನು ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಬರೋಬ್ಬರಿ 69 ಸ್ಥಾನ ಮೇಲಕ್ಕೆ ಜಿಗಿದು, ಇದೀಗ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಶ್ರೇಯಾಂಕ ಕುಸಿದಿದೆ.
1 / 7
ಐಸಿಸಿ ಇಂದು ಬಿಡುಗಡೆ ಮಾಡಿರುವ ನೂತನ ಐಸಿಸಿ ಟಿ20 ಆಲ್ರೌಂಡರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್ ಬಳಿಕ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಪಾಂಡ್ಯ, ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಪಾಂಡ್ಯ ಮತ್ತೆ ನಂಬರ್ 1 ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
2 / 7
ಇದೀಗ ನಂಬರ್ 1 ಸ್ಥಾನಕ್ಕೇರುವುದರೊಂದಿಗೆ ಹಾರ್ದಿಕ್, ಇಂಗ್ಲೆಂಡ್‌ನ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟನ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿದ್ದಾರೆ. ಇನ್ನು ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದ ಯುವ ಆಟಗಾರ ತಿಲಕ್ ವರ್ಮಾ ಕೂಡ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ.
3 / 7
ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಆಫ್ರಿಕಾ ವಿರುದ್ಧದ ಎರಡನೇ ಟಿ20ಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಹಾರ್ದಿಕ್ 39 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.
4 / 7
ಇದಲ್ಲದೆ ಈ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಇದರ ಲಾಭ ಪಡೆದಿರುವ ಹಾರ್ದಿಕ್ ಟಿ20ಯಲ್ಲಿ ವಿಶ್ವದ ನಂಬರ್ ಒನ್ ಆಲ್ ರೌಂಡರ್ ಎನಿಸಿಕೊಂಡಿದ್ದಾರೆ.
5 / 7
ಇನ್ನು ತಿಲಕ್ ವರ್ಮಾ ವಿಚಾರಕ್ಕೆ ಬರುವುದಾದರೆ.. ಆಫ್ರಿಕಾ ವಿರುದ್ಧ ಸತತ ಎರಡು ಶತಕ ಸಿಡಿಸಿದ್ದ ತಿಲಕ್, ಬರೋಬ್ಬರಿ 69 ಸ್ಥಾನಗಳ ಜಿಗಿತ ಸಾಧಿಸುವ ಮೂಲಕ ಇದೀಗ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ 72ನೇ ಸ್ಥಾನದಲ್ಲಿದ್ದ ತಿಲಕ್, ಈಗ ಟಾಪ್ 3ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
6 / 7
ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 107 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ತಿಲಕ್, ಆ ಬಳಿಕ ಜೋಹಾನ್ಸ್‌ಬರ್ಗ್‌ನಲ್ಲಿಯೂ ಅಜೇಯ 120 ರನ್ ಗಳಿಸಿದ್ದರು. ಈ ಸರಣಿಯಲ್ಲಿ ತಿಲಕ್ ವರ್ಮಾ 140ರ ಸರಾಸರಿಯಲ್ಲಿ 20 ಸಿಕ್ಸರ್ ಮತ್ತು 21 ಬೌಂಡರಿಗಳ ಸಹಿತ 280 ರನ್ ಗಳಿಸಿದ್ದರು.
7 / 7
ಒಂದು ಕಾಲದಲ್ಲಿ ಟಿ20 ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್ ಈಗ ತಿಲಕ್ ವರ್ಮಾ ಅವರಿಗಿಂತ ಕೆಳಕ್ಕೆ ಕುಸಿದಿದ್ದಾರೆ. ಪ್ರಸ್ತುತ ಸೂರ್ಯ 4ನೇ ಸ್ಥಾನದಲ್ಲಿದ್ದಾರೆ. ಸೌತ್ ಆಫ್ರಿಕಾ ಸರಣಿಯಲ್ಲಿ ಸೂರ್ಯ ಅವರ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಆಡಿದ 3 ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಕೇವಲ 26 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಸರಾಸರಿಯು 9 ಕ್ಕಿಂತ ಕಡಿಮೆಯಿತ್ತು, ಇದರ ಪರಿಣಾಮವಾಗಿ ಸೂರ್ಯ ಟಿ20 ಶ್ರೇಯಾಂಕದಲ್ಲಿ ನಷ್ಟವನ್ನು ಅನುಭವಿಸಿದ್ದಾರೆ.