Updated on: Jan 25, 2024 | 10:30 PM
ಭಾರತ ಟಿ20 ತಂಡದಲ್ಲಿ ಫಿನಿಶರ್ ಸ್ಥಾನವನ್ನು ತುಂಬುತ್ತಿರುವ ಯುವ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್, ತಮ್ಮ ಕಡಿಮೆ ವೃತ್ತಿಜೀವನದಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ. ರಿಂಕು ಸಿಂಗ್ ಅವರನ್ನು ಭಾರತ ಕ್ರಿಕೆಟ್ನ ಭವಿಷ್ಯ ಎಂದು ಬಣ್ಣಿಸಲಾಗುತ್ತಿದೆ.
ಇದೀಗ ಅದರ ಫಲವಾಗಿ ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಶ್ರೇಯಾಂಕದಲ್ಲಿ ರಿಂಕು ಸಿಂಗು ಭಾರಿ ಮುನ್ನಡೆ ಸಾಧಿಸಿದ್ದು ಬರೋಬ್ಬರಿ 39 ಸ್ಥಾನಗಳ ಜಿಗಿತ ಕಂಡಿದ್ದಾರೆ.
ಮೇಲೆ ಹೇಳಿದಂತೆ ನೂತನ ಟಿ20 ಶ್ರೇಯಾಂಕದಲ್ಲಿ 39 ಸ್ಥಾನಗಳನ್ನು ಜಿಗಿತ ಕಂಡಿರುವ ರಿಂಕು ಸಿಂಗ್ 548 ರೇಟಿಂಗ್ ಅಂಕಗಳೊಂದಿಗೆ 31ನೇ ಸ್ಥಾನಕ್ಕೇರಿದ್ದಾರೆ.
ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಭರ್ಜರಿ ಲಾಭ ಪಡೆದಿದ್ದು, ಬರೋಬ್ಬರಿ 19 ಸ್ಥಾನ ಮೇಲೇರಿ 49ನೇ ಸ್ಥಾನಕ್ಕೇರಿದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ 2 ಸ್ಥಾನ ಕಳೆದುಕೊಂಡು 46ನೇ ಸ್ಥಾನಕ್ಕೆ ಕುಸಿದಿದ್ದಾರೆ.
26ರ ಹರೆಯದ ರಿಂಕು ಕಳೆದ ವರ್ಷ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಂತರ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲೂ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.
ಟಿ20 ತಂಡದಲ್ಲಿ ನಿರಂತರವಾಗಿ ಅವಕಾಶಗಳನ್ನು ಪಡೆಯುತ್ತಿರುವ ರಿಂಕು ಅದರ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರಿಂಕು ಅಮೋಘ ಪ್ರದರ್ಶನ ಕೂಡ ನೀಡಿದ್ದರು.
ರಿಂಕು ಸಿಂಗ್ ಇದುವರೆಗೆ ಟೀಂ ಇಂಡಿಯಾ ಪರ 15 ಟಿ20 ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟಿ20ಯಲ್ಲಿ ಅವರು 89.00 ಸರಾಸರಿ ಮತ್ತು 176.23 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧಶತಕ ಸಹಿತ 356 ರನ್ ಗಳಿಸಿದ್ದಾರೆ.
ಅದೇ ಸಮಯದಲ್ಲಿ, ಏಕದಿನದಲ್ಲಿ 27.50 ಸರಾಸರಿಯಲ್ಲಿ 55 ರನ್ ಗಳಿಸಿರುವ ರಿಂಕು ಸಿಂಗ್ ಪ್ರಸ್ತುತ ಭಾರತ ಎ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ಲಯನ್ಸ್ ವಿರುದ್ಧ ನಾಲ್ಕು ದಿನಗಳ ಪಂದ್ಯವನ್ನು ಆಡುತ್ತಿದ್ದಾರೆ. ಆದರೆ ರಿಂಕು ಈ ಪಂದ್ಯದಲ್ಲಿ ಖಾತೆಯನ್ನೂ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.