Updated on: Mar 01, 2023 | 3:02 PM
ಬುಧವಾರ ಬಿಡುಗಡೆಯಾದ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಈ ಹಿಂದೆ ನಂ.1 ಸ್ಥಾನದಲ್ಲಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. ಆಂಡರ್ಸನ್ ಕಳೆದ ವಾರವಷ್ಟೇ ನಂಬರ್ 1 ಪಟ್ಟಕ್ಕೇರಿದ್ದರು. ಆದರೆ ಇದೀಗ ಅಶ್ವಿನ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ.
864 ರೇಟಿಂಗ್ ಅಂಕಗಳೊಂದಿಗೆ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದರೆ, ಜೇಮ್ಸ್ ಆಂಡರ್ಸನ್ 859 ರೇಟಿಂಗ್ ಅಂಕಗಳನ್ನು ಹೊಂದಿದ್ದು 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 2015 ರಲ್ಲಿ ಮೊದಲ ಬಾರಿಗೆ ನಂಬರ್ 1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದ ಅಶ್ವಿನ್, 2016 ರಲ್ಲೂ ಈ ಸ್ಥಾನಕ್ಕೇರಿದ್ದರು.
ಅಶ್ವಿನ್ ಹೊರತುಪಡಿಸಿ ಭಾರತದ ಇಬ್ಬರು ಬೌಲರ್‌ಗಳು ಐಸಿಸಿ ರ್ಯಾಂಕಿಂಗ್‌ನಲ್ಲಿ ಛಾಪು ಮೂಡಿಸಿದ್ದು, ಬಹುದಿನಗಳಿಂದ ಟೀಂ ಇಂಡಿಯಾದಿಂದ ದೂರವಿರುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೇರಿದ್ದರೆ, ರವೀಂದ್ರ ಜಡೇಜಾ 8ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲಿಂಗ್ ವಿಭಾಗವನ್ನು ಹೊರತುಪಡಿಸಿ, ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿಯೂ ಮುಂಚೂಣಿಯಲ್ಲಿರುವ ಅಶ್ವಿನ್, ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಮತ್ತೊಬ್ಬ ಆಲ್ರೌಂಡರ್ ರವೀಂದ್ರ ಜಡೇಜಾ ಈ ವಿಭಾಗದಲ್ಲಿ ನಂ.1 ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.