- Kannada News Photo gallery Cricket photos ICC Test Rankings Yashasvi Jaiswal reached 29th rank in test battings
ICC Test Rankings: ನೂತನ ಟೆಸ್ಟ್ ರ್ಯಾಂಕಿಂಗ್ನಲ್ಲಿ 37 ಸ್ಥಾನ ಜಿಗಿದ ಯಶಸ್ವಿ ಜೈಸ್ವಾಲ್..!
ICC Test Rankings, Yashasvi Jaiswal: ಇಂಗ್ಲೆಂಡ್ ವಿರುದ್ಧ ದ್ವಿಶತಕದ ಇನ್ನಿಂಗ್ಸ್ ಆಡಿ ಟೀಂ ಇಂಡಿಯಾದ ಗೆಲುವಿಗೆ ಮುನ್ನುಡಿ ಬರೆದಿದ್ದ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇದೀಗ ಟೆಸ್ಟ್ ಶ್ರೇಯಾಂಕದಲ್ಲೂ ಭರ್ಜರಿ ಮುಂಬ್ತಡಿ ಪಡೆದಿದ್ದಾರೆ. ಈ ಎಡಗೈ ದಾಂಡಿಗ ಇದೀಗ 632 ರೇಟಿಂಗ್ಸ್ನೊಂದಿಗೆ 29ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
Updated on: Feb 07, 2024 | 3:18 PM

ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬರೋಬ್ಬರಿ 37 ಸ್ಥಾನ ಮುಂಬಡ್ತಿ ಪಡೆದು 29ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಇದಕ್ಕೂ ಮುನ್ನ ಜೈಸ್ವಾಲ್ 66ನೇ ಸ್ಥಾನದಲ್ಲಿದ್ದರು.

ಟೆಸ್ಟ್ ವೃತ್ತಿಜೀವನದಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳನ್ನಾಡಿರುವ ಜೈಸ್ವಾಲ್, ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 207 ರನ್ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಇದು ಜೈಸ್ವಾಲ್ರ ಮೊದಲ ದ್ವಿಶತಕವೂ ಆಗಿತ್ತು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 88 ರನ್ ಕಲೆಹಾಕಿದ್ದ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲಿ 15 ರನ್ಗಳಿಗೆ ಸುಸ್ತಾಗಿದ್ದರು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಜೈಸ್ವಾಲ್ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಜೈಸ್ವಾಲ್ ಸಿಡಿಸಿದ ಈ ದ್ವಿಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಉಳಿದಂತೆ ಟೆಸ್ಟ್ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ 864 ರೇಟಿಂಗ್ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 818 ರೇಟಿಂಗ್ ಹೊಂದಿದ್ದಾರೆ.

ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪೈಕಿ 7ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಒಬ್ಬರೇ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಟೀಂ ಇಂಡಿಯಾದಿಂದ ದೂರವಿರುವ ವಿರಾಟ್ ಕೊಹ್ಲಿ 760 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.

ಟೀಂ ಇಂಡಿಯಾದ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 714 ರೇಟಿಂಗ್ನೊಂದಿಗೆ 12 ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 702 ರೇಟಿಂಗ್ನೊಂದಿಗೆ 13ನೇ ಸ್ಥಾನದಲ್ಲಿದ್ದಾರೆ.

ಹಾಗೆಯೇ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಇದ್ದಾರೆ. ಪ್ರಸ್ತುತ ಜಡೇಜಾ 416 ರೇಟಿಂಗ್ಸ್ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಆರ್ ಅಶ್ವಿನ್ 326 ರೇಟಿಂಗ್ಸ್ ಹೊಂದಿದ್ದಾರೆ.




