Updated on: Feb 26, 2023 | 10:24 PM
ICC Womens T20 World Cup 2023 Final: ಕೇಪ್ಟೌನ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಟಿ20 ವಿಶ್ವಕಪ್ನಲ್ಲಿ ಆಸೀಸ್ ಮಹಿಳಾ ತಂಡವು 6ನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಂತಾಗಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸೀಸ್ ಬಳಗಕ್ಕೆ ಅಲಿಸ್ಸಾ ಹೀಲಿ ಹಾಗೂ ಬೆತ್ ಮೂನಿ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ ಬಿರುಸಿನ 36 ರನ್ ಪೇರಿಸಿ ಹೀಲಿ (18) ಔಟಾದರು.
ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬೆತ್ ಮೂನಿ ಸೌತ್ ಆಫ್ರಿಕಾ ಬೌಲರ್ಗಳನ್ನು ಮನಸೊ ಇಚ್ಛೆ ದಂಡಿಸಿದರು. ಪರಿಣಾಮ ಮೂನಿ ಬ್ಯಾಟ್ನಿಂದ 1 ಸಿಕ್ಸ್ ಹಾಗೂ 9 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 53 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸಿದರು. ಅದರಂತೆ ಆಸ್ಟ್ರೇಲಿಯಾ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿತು.
157 ರನ್ಗಳ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ (10) ಬೇಗನೆ ಔಟಾದರು. ಆ ಬಳಿಕ ಬಂದ ಮರಿಜಾನ್ನೆ ಕಪ್ (11) ಗಾರ್ಡ್ನರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು 4ನೇ ಕ್ರಮಾಂಕದಲ್ಲಿ ಆಡಿದ ನಾಯಕಿ ಸುನೆ ಲೂಸ್ (2) ರನೌಟ್ಗೆ ಬಲಿಯಾದರು.
ಇದಾಗ್ಯೂ ಮತ್ತೊಂದೆಡೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ಟ್ 48 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 61 ರನ್ ಚಚ್ಚಿದರು. ಈ ಹಂತದಲ್ಲಿ ದಾಳಿಗಿಳಿದ ಮೇಗನ್ ಶಟ್, ಲಾರಾ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಅವಶ್ಯಕ ಯಶಸ್ಸು ತಂದುಕೊಟ್ಟರು.
ಪರಿಣಾಮ ಕೊನೆಯ 3 ಓವರ್ಗಳಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 43 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಕೊನೆಯ 6 ಎಸೆತಗಳಲ್ಲಿ 27 ರನ್ಗಳು ಬೇಕಿತ್ತು. ಆದರೆ ಫೈನಲ್ ಓವರ್ ಎಸೆದ ಆಶ್ಲೀ ಗಾರ್ಡ್ನರ್ ನೀಡಿದ್ದು ಕೇವಲ 7 ರನ್ ಮಾತ್ರ. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 19 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಸೀಸ್ ತಂಡವು ಮಹಿಳಾ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Published On - 9:35 pm, Sun, 26 February 23